ಲೋಕಬಂಧು ನ್ಯೂಸ್ | ಕಾಪು, ಆ.9
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಕಾಪು ಮಂಡಲ ವತಿಯಿಂದ ಶನಿವಾರ ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಗೂ ಮುನ್ನ ಕಾಪು ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯ ವರೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಕಾಲ್ನಡಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅನೇಕ ಮಂದಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನನ್ನ ಬದುಕಿನಲ್ಲಿ ಯಾರ ಮನಸ್ಸಿಗೂ ನೋವು ಮಾಡಿಲ್ಲ. ಮೋಸ, ವಂಚನೆ ನನಗೆ ಗೊತ್ತಿಲ್ಲ. ಬಡ ಕುಟುಂಬದಿಂದ ಬಂದ ನಾನು ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದೇನೆ. ಆದರೆ, ರಾತ್ರಿ–ಹಗಲು ಎನ್ನದೆ ನನ್ನ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ನನ್ನದಲ್ಲದ ತಪ್ಪಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ರಾಜಕೀಯವಾಗಿ ಎಷ್ಟೇ ಕಷ್ಟಗಳು ಎದುರಾದರೂ ಅವುಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಂದ ನನಗೆ ಸಿಕ್ಕಿದೆ. ಹಾಗಾಗಿ ಎಷ್ಟೇ ಸವಾಲುಗಳು ಎದುರಾದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಬಗ್ಗೆ ಅವಹೇಳನ ಮಾಡುವ ಮಟ್ಟಕ್ಕೆ ರಾಜಕೀಯ ಇಳಿದಿರುವುದು ದುರದೃಷ್ಟಕರ. ಕರಾವಳಿಯಲ್ಲಿ ನಮ್ಮ ಹಿರಿಯರು ರಾಜಕಾರಣ ಮಾಡಿದ್ದಾರೆ. ಆದರೆ, ರಾಜಕಾರಣ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿರಲಿಲ್ಲ. ರಾಜಕೀಯದಲ್ಲಿ ಸೋಲು–ಗೆಲುವು ಸಹಜ. ಆದರೆ, ನಮ್ಮ ಸಂಸ್ಕಾರವನ್ನು ಎಂದಿಗೂ ಮರೆಯಬಾರದು ಎಂದರು.
ಅಯೋಧ್ಯೆ ಶ್ರೀರಾಮ ಮಂದಿರ ವಿಚಾರ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್‌ನವರಿಗೆ ಈಗಲಾದರೂ ಶ್ರೀರಾಮನ ಬಗ್ಗೆ ಕಾಳಜಿ ಬಂದಿದೆ. ರಾಮ ಮಂದಿರ ನಿರ್ಮಾಣ ಆಗಕೂಡದು ಎಂದು ದೊಡ್ಡ ವಕೀಲರ ತಂಡವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ನಿಯೋಜಿಸಲಾಗಿತ್ತು. ರಾಮ ಮಂದಿರದ ಹುಂಡಿ ಕಳವು ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ತಕ್ಕ ಶಿಕ್ಷೆ ನೀಡುವ ಕೆಲಸವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮಾಡಲಿದೆ ಎಂದು ಶಾಸಕ ಗುರ್ಮೆ ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿಯೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ಯಾರೂ ಸಮರ್ಥಿಸುವುದಿಲ್ಲ. ಆದರೆ, ದೇಶದಲ್ಲಿ ಈ ಹಿಂದೆ 152ಕ್ಕೂ ಹೆಚ್ಚು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಆ ಸಂದರ್ಭಗಳಲ್ಲಿ ಯಾರೂ ಪ್ರಶ್ನಿಸಿರಲಿಲ್ಲ ಎಂದು ಕಿಡಿಕಾರಿದರು.
ತಾಜ್ ಮಹಲ್ ವೀಕ್ಷಿಸಲು ವರ್ಷಕ್ಕೆ 60ರಿಂದ 70 ಲಕ್ಷ ಜನ ತೆರಳುತ್ತಿದ್ದರು. ಆದರೆ, ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 13 ಕೋಟಿ ಜನ ಭೇಟಿ ನೀಡಿದ್ದಾರೆ. ರಾಮ ಮಂದಿರದ ಯಶಸ್ಸು ಬಿಜೆಪಿಗೆ ಸಲ್ಲಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಗುರ್ಮೆ ಆರೋಪಿಸಿದರು.
ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ ಹಾಗೂ ವಿಕಲಚೇತನರ ವೇತನವನ್ನು ನಿಲ್ಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದವರು ದೂರಿದರು.
ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮೊದಲಾದವರಿದ್ದರು.
