ಮಹಿಳೆಯರ ಆತ್ಮವಿಶ್ವಾಸಕ್ಕೆ ಶಿಕ್ಷಣವೇ ಶಕ್ತಿ

ಲೋಕಬಂಧು ನ್ಯೂಸ್ | ಉಡುಪಿ, ಆ.23
ಮಹಿಳೆಯರು ಬೌದ್ಧಿಕ ಹಾಗೂ ಮಾನಸಿಕ ದಾಸ್ಯದಿಂದ ಹೊರಬರಬೇಕು. ಶಿಕ್ಷಣದಿಂದ ಆತ್ಮವಿಶ್ವಾಸ ಮತ್ತು ಆತ್ಮಬಲ ಗಳಿಸಿಕೊಳ್ಳಲು ಸಾಧ್ಯ ಎಂದು ಲೇಖಕಿ ನಾಗವೇಣಿ ಮಂಚಿ ಹೇಳಿದರು.
ಅಜ್ಜರಕಾಡು ಡಾ.ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾನವಿಕ ಸಂಘ ಶನಿವಾರ ಆಯೋಜಿಸಿದ್ದ ಮಹಿಳೆ, ಶಿಕ್ಷಣ ಮತ್ತು ಸಬಲೀಕರಣ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಕ್ಷಣ ಅವಕಾಶಗಳ ಬಾಗಿಲು ತೆರೆಯುತ್ತದೆ. ಮಹಿಳೆ ತನ್ನ ಹಕ್ಕು ಮತ್ತು ಬಾಧ್ಯತೆಗಳನ್ನು ಅರಿತುಕೊಳ್ಳಲು, ಜ್ಞಾನ, ಉದ್ಯೋಗ ಹಾಗೂ ಜಾಗೃತಿಯನ್ನು ಪಡೆಯಲು ಶಿಕ್ಷಣ ನೆರವಾಗುತ್ತದೆ. ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದಲ್ಲ, ಬದುಕನ್ನು ಕಟ್ಟಿಕೊಳ್ಳುವ ದೃಢತೆಯನ್ನು ನೀಡುವುದು ಶಿಕ್ಷಣದ ಉದ್ದೇಶ ಎಂದರು.


ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅವುಗಳನ್ನು ಅನುಭವಗಳಾಗಿ ಪರಿವರ್ತಿಸಿಕೊಳ್ಳಬೇಕು. ಸ್ವಯಂ ನಿಯಂತ್ರಣ ಬೆಳೆಸಿಕೊಳ್ಳುವುದೂ ಮಹಿಳೆಯರ ಸ್ವಾವಲಂಬನೆಗೆ ಅಗತ್ಯ. ಕೌಟುಂಬಿಕ ಬದುಕಿನ ಬಗ್ಗೆ ಹಿಂಜರಿಕೆ ಬೇಡ ಎಂದವರು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ, ಮಹಿಳಾ ಸಬಲೀಕರಣ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದರು.


ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಡಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕೆ., ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಮ್ಯಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಫಿಯಾ ಇದ್ದರು.


ಇತಿಹಾಸ ವಿಭಾಗ ಮುಖ್ಯಸ್ಥ ಡಾ.ನವೀನ್ ಕೊಣಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಆಶಾ ಅತಿಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕ ಮಂಜುನಾಥ ವಂದಿಸಿದರು.