ಉಡುಪಿಯಲ್ಲಿ `ಶಂಕರ ವಿಜಯೋತ್ಸವ'ಕ್ಕೆ ಸಿದ್ಧತೆ

ಲೋಕಬಂಧು ನ್ಯೂಸ್ | ಉಡುಪಿ, ಆ.17
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಉಭಯ ಜಗದ್ಗುರುಗಳ ಅಪ್ಪಣೆಯಂತೆ ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳ ಅದ್ವೈತ ಸಿದ್ಧಾಂತ ಪ್ರತಿಪಾದಕರಾದ ಜಗದ್ಗುರು ಶ್ರೀ ಶಂಕರಾಚಾರ್ಯರ ಅನುಯಾಯಿಗಳ ಸಹಯೋಗದೊಂದಿಗೆ ಉಡುಪಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶೃಂಗೇರಿಯ ಶಾಂಕರ ತತ್ತ್ವ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕ ತೇಜಶಂಕರ ಸೋಮಯಾಜಿ ತಿಳಿಸಿದರು.
ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದ ಜ್ಞಾನ ಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಅನುಯಾಯಿಗಳ ಉಪಸ್ಥಿತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಶೃಂಗೇರಿ ಶಂಕರ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ಕಾರ್ಯಕ್ರಮದ ರೂಪುರೇಷೆ ನೀಡಿದರು. ಮುಖ್ಯವಾಗಿ ಕಾಸರಗೋಡು, ದ.ಕ. ಮತ್ತು ಉಡುಪಿ ಜಿಲ್ಲೆಗಳ ಶಾಂಕರ ಅನುಯಾಯಿಗಳನ್ನು ಒಟ್ಟುಸೇರಿಸಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.


ಶೃಂಗೇರಿ ಮಠದ ಕುಂದಾಪುರ ಪ್ರಾಂತದ ಧರ್ಮಾಧಿಕಾರಿ ಲೋಕೇಶ ಅಡಿಗ, ಉಡುಪಿ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಹೆಬ್ಬಾರ್ ವೇದಿಕೆಯಲ್ಲಿದ್ದರು.


ಶಾಂಕರ ತತ್ವ ಪ್ರಚಾರ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ ಶಾನುಭಾಗ್ ಸ್ವಾಗತಿಸಿ, ವಂದಿಸಿದರು. ಶಾಂಕರ ಅನುಯಾಯಿ ವಿವಿಧ ಸಮಾಜಗಳ 40ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.