ಸಾಮವೇದ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಆ.17
ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಶಿಷ್ಯ ಭಂಡಾರಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ ವ್ರತ ಸುಸಂದರ್ಭದಲ್ಲಿ ನೂರು ಮಂದಿ ವೇದ ವಿದ್ವಾಂಸರ ಸಂಮಾನದ ಅಂಗವಾಗಿ ಸೋಮವಾರ ಭಂಡಾರಕೇರಿ ಮೂಲ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹತ್ತು ಮಂದಿ ಸಾಮವೇದ ವಿದ್ವಾಂಸರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಸಾಮಗಾನಸುರಾಚಾರ್ಯಸಾಮೋದ್ಗಾನದೇಶಿಕ ಮತ್ತು ಸಾಮಗಾನಶುಚಿವ್ರತ ಎಂಬ ಪ್ರಶಸ್ತಿಗಳನ್ನು ವಿವಿಧ ರಾಜ್ಯಗಳ ವಿಶಿಷ್ಟ ಸಾಧಕರಿಗೆ ಸಂಭಾವನೆ ಸಹಿತ ಪ್ರಶಸ್ತಿ ನೀಡಿ ಪುರಸ್ಕರಿಸಿದರು.


ನಂತರ ಎಲ್ಲಾ ವಿದ್ವಾಂಸರು ಈ ಪಾರಾಯಣ ಯಜ್ಞವನ್ನು ಶ್ರೀಗಳ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಿ ಸಮಾಪ್ತಿಗೊಳಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ನಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಜ್ಞಾನಸೇವೆಯ ಮೂಲಕ ಕೃಷ್ಣನನ್ನು ಒಲಿಸಿಕೊಂಡರು. ಅವರ ಅತ್ಯುಚ್ಚ ಜ್ಞಾನದಾನ ನಡೆದದ್ದು ಭಂಡಾರಕೇರಿ ಮಠದಲ್ಲಿ. 1925ರಲ್ಲಿ ಅವರು ಸತ್ಯತೀರ್ಥ ಪೀಠವನ್ನಲಂಕರಿಸಿದ ಗೌರವಾರ್ಥ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.


ಸಾಮವೇದ ಅಭ್ಯಸಿಸುವವರು ತುಂಬಾ ವಿರಳವಾಗಿರುವ ಈ ಕಾಲಘಟ್ಟದಲ್ಲಿ ಬಹಳ ಶ್ರಮದಿಂದ ಸಾಮವೇದ ವಿದ್ಯೆಯನ್ನು ಉಳಿಸಿಕೊಂಡು ಬಂದಿರುವ ವಿದ್ವಾಂಸರ ಕಾರ್ಯ ಶ್ಲಾಘನೀಯ ಎಂದವರು ಬಣ್ಣಿಸಿದರು.


ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಅಭ್ಯಾಗತರಾಗಿದ್ದರು.


ಸಂಮಾನಿತ ವಿದ್ವಾಂಸರಾದ ಪ್ರಭಾಕರ ಅಡಿಗ, ದತ್ತಾತ್ರೇಯ ಶರ್ಮ ಮತ್ತು ಸುದರ್ಶನ ಸಾಮಗ ಮಾತನಾಡಿ, ಪಾರಂಪರಿಕವಾದ ಸಾಮವೇದ ವಿದ್ಯೆಯನ್ನು ಉಳಿಸಲು ಇನ್ನೂ ಅನೇಕ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಆಶಿಸಿದರು.