ನಾಗರ ಪಂಚಮಿ ನಾಡಿಗೇ ದೊಡ್ಡ ಹಬ್ಬ. ಅದರಲ್ಲೂ ನಾಗಭೂಮಿ ಎಂದೇ ಕರೆಯಲ್ಪಡುವ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಹಬ್ಬಕ್ಕೆ ಇನ್ನಷ್ಟು ವಿಶೇಷತೆ ಇದೆ. 'ಕಲ್ಲ ನಾಗನಿಗೆ ಹಾಲೆವರು, ದಿಟದ ನಾಗನ ಕೊಲ್ಲುವರಯ್ಯ' ಎಂಬ ಮಾತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿಟದ ಮಾತಲ್ಲ. ಇಲ್ಲಿ ನಾಗನಕಲ್ಲಿಗೂ ಪೂಜೆ ಇದೆ, ದಿಟದ ನಾಗ ಕಂಡರೂ ಕೈಮುಗಿಯುತ್ತಾರೆ, ಸತ್ತ ನಾಗನಿಗೆ ಅಂತ್ಯೇಷ್ಠಿಯನ್ನೂ ಮಾಡಲಾಗುತ್ತದೆ. ನಾಗಾರಾಧನೆ ತುಳುನಾಡಿನಲ್ಲಿ ಆಧ್ಯಾತ್ಮಿಕ ಮತ್ತು ಜಾನಪದ ಆಚರಣೆ.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ನಾಗರ ಪಂಚಮಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ನಾಗದೇವತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಪುರಾಣಗಳಲ್ಲಿ ನಾಗನನ್ನು ಶಿವನೊಂದಿಗೆ ಹಾಗೂ ಭೂಮಿಯ ರಕ್ಷಣೆಯೊಂದಿಗೆ ಸಂಬಂಧಿಸಲಾಗಿದೆ. ನಾಗಪೂಜೆಯ ಮೂಲಕ ಪ್ರಕೃತಿ, ಜೀವಜಾಲ ಮತ್ತು ಪರಿಸರದ ಬಗ್ಗೆ ಗೌರವ ಬೆಳೆಸುವ ಆಧ್ಯಾತ್ಮಿಕ ಸಂದೇಶವೂ ಇದೆ.
ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಹಾವುಗಳು ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ. ಅವು ಇಲಿ ಸೇರಿದಂತೆ ಹಲವು ಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಕೃಷಿ ಹಾಗೂ ಪರಿಸರ ಸಮತೋಲನಕ್ಕೆ ನೆರವಾಗುತ್ತವೆ. ಮಳೆಗಾಲದಲ್ಲಿ ಹಾವುಗಳು ತಮ್ಮ ವಾಸಸ್ಥಳಗಳಿಂದ ಹೊರಬರುವ ಸಾಧ್ಯತೆ ಹೆಚ್ಚಿರುವುದರಿಂದ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಸಂದರ್ಭವೂ ನಾಗರ ಪಂಚಮಿಯಾಗಿದೆ.
ಆದ್ದರಿಂದ ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಲ್ಲ; ಜೀವಜಾಲದ ಸಂರಕ್ಷಣೆ, ಪ್ರಕೃತಿಯ ಗೌರವ ಮತ್ತು ಪರಿಸರ ಸಮತೋಲನದ ಮಹತ್ವವನ್ನು ಸಾರುವ ಸಾಂಸ್ಕೃತಿಕ ಪರಂಪರೆಯಾಗಿದೆ.