ಲೋಕಬಂಧು ನ್ಯೂಸ್ | ನವದೆಹಲಿ, ಆ.5
ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನೇಕ ನಾಯಕರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಲ್ಲಿ ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪಕ್ಷದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಹಿರಿಯ ನಾಯಕರಾಗಲಿ ಅಥವಾ ಕಿರಿಯ ನಾಯಕರಾಗಲಿ ಯಾರೂ ಸಂತುಷ್ಟರಾಗಿಲ್ಲ. ಪ್ರಾತಿನಿಧ್ಯದ ವಿಚಾರದಲ್ಲಿ ಮಹಿಳೆಯರಿಗೂ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಹಾಗೂ ಹಲವು ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡದೇ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಅನುಕೂಲಕ್ಕಾಗಿ ಸಂಪುಟ ವಿಸ್ತರಣೆ ಮಾಡಲಾಗಿದೆ. ಹಾಗಾಗಿ ಬಹಳ ಜನರು ಬೇಸರಗೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ ಹೊರಹಾಕಿದರು.
