ಲೋಕಬಂಧು ನ್ಯೂಸ್ | ಶಿರ್ವ, ಆ.7
ಕಾಪು ತಾಲೂಕಿನ ಪಿಲಾರು ಗ್ರಾಮದ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೈಂಟ್ ಫ್ರಾನ್ಸಿಸ್ ಜೆವಿಯರ್ ಚರ್ಚ್ ಎದುರುಗಡೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿ'ಸೋಜನನ್ನ ದುಷ್ಕಮಿಗಳು ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್'ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ದಾರಿಮಧ್ಯೆ ಮೃತಪಟ್ಟರು. ಶೂಟೌಟ್'ಗೆ ನಿಖರ ಕಾರಣ ತಿಳಿದುಬಂದಿಲ್ಲ.
2020ರಲ್ಲಿ ನಡೆದ ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಮಹೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಬಳಿಕ ಡೇವಿಡ್ ಬಿಡುಗಡೆಗೊಂಡಿದ್ದ.
ಘಟನೆ ನಡೆದ ಸ್ಥಳಕ್ಕೆ ಶಿರ್ವ ಹಾಗೂ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಪರಾಧ ಸ್ಥಳ ಪರಿಶೀಲನಾಧಿಕಾರಿ ತಂಡ ಮತ್ತು ಶ್ವಾನದಳಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಮುಂದುವರಿದಿದೆ. ಶೂಟೌಟ್'ನ ಭೀಕರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಸುಮಾರು ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಎರಡನೆಯ ಶೂಟೌಟ್ ಪ್ರಕರಣ ಇದಾಗಿದೆ. ಕಳೆದ ವಾರ ಕುಂದಾಪುರದಲ್ಲಿ ಶೂಟೌಟ್ ನಡೆದಿತ್ತು.