ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟ

ಲೋಕಬಂಧು ನ್ಯೂಸ್ | ಉಡುಪಿ,ಆ.23
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟಣೆ ಮತ್ತು ಕರಡು ಪ್ರಕಟಣೆಯ ನಂತರದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪರಿಷ್ಕೃತ ಎಸ್ಐಆರ್ ವೇಳಾಪಟ್ಟಿಯಂತೆ ಆ.17ಕ್ಕೆ ಎನ್ಯುಮರೇಷನ್ ನಮೂನೆಗಳನ್ನು ಮನೆ ಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆ.24ರಂದು ಬೆಳಿಗ್ಗೆ 11 ಗಂಟೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಹಾಗೂ ಪ್ರಕಟಗೊಂಡ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಒಂದು ಮುದ್ರಿತ ಪ್ರತಿ ಹಾಗೂ ಒಂದು ಸಾಫ್ಟ್ ಕಾಪಿ ಪಟ್ಟಿ ನೀಡಲಾಗುವುದು ಎಂದರು.


ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಗಿದಿದ್ದು, ಜಿಲ್ಲೆಯ ಒಟ್ಟು 10,63,876 ಮತದಾರರ ಪೈಕಿ 10,00,545 ಮತದಾರರ ಗಣತಿ ನಮೂನೆಯನ್ನು ಡಿಜಿಟಲೈಸ್ ಮಾಡಲಾಗಿದೆ. ಉಳಿದಂತೆ ಎ.ಎಸ್.ಡಿ. ಡಿ ಪಟ್ಟಿಯಲ್ಲಿರುವ ಮೃತಪಟ್ಟ 21,262, ಶಾಶ್ವತವಾಗಿ ಸ್ಥಳಾಂತರಗೊಂಡ 29,361, ಗೈರುಹಾಜರಾದ 4,145, ದ್ವಿಪ್ರತಿಯಲ್ಲಿ ಕಾರ್ಡ್ ಪಡೆದುಕೊಂಡ 8,374 ಹಾಗೂ ಇತರ 189 ಮಂದಿ ಮತದಾರರು ಸೇರಿದಂತೆ ಒಟ್ಟು 63,331 ಮತದಾರರು ವಿವಿಧ ಕಾರಣಗಳಿಂದ ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ ಎಂದರು.


ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ್ಯಂತ ಒಟ್ಟು 10,63,876 ಮತದಾರರ ಪೈಕಿ 97,697 ಮತದಾರರು (ಶೇ.9.18) ವಿಚಾರಣಾ ಹಂತಕ್ಕೆ ಒಳಪಡಲಿದ್ದಾರೆ ಹಾಗೂ ಇಆರ್.ಒ/ಎಇಆರ್.ಒ ಹಂತದಲ್ಲಿ ಕನಿಷ್ಟ 7 ದಿನಗಳ ಮುಂಚಿತವಾಗಿ ವಿಚಾರಣೆ ನೋಟೀಸ್ ಜಾರಿ ಮಾಡಲಾಗುತ್ತದೆ. ಇಎಲ್ಒಗಳು ಮನೆ ಮನೆಗೆ ತೆರಳಿ ನೋಟಿಸ್ ತಲುಪಿಸಿ, ಸ್ವೀಕೃತಿ ಪಡೆದು ಸ್ವೀಕರಿಸಿದವರ ಭಾವಚಿತ್ರದೊಂದಿಗೆ ಅಪ್‌ಲೋಡ್ ಮಾಡಲಿದ್ದಾರೆ. ನಿಗದಿಪಡಿಸಿದ ಸ್ಥಳಗಳಲ್ಲಿ ವಿಚಾರಣೆ ನಡೆಸಿ ಸೂಕ್ತ ದಾಖಲೆ ಪರಿಶೀಲಿಸಿದ ನಂತರ ಇಆರ್.ಒಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.


ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಭಾರತೀಯ ಜನತಾ ಪಕ್ಷದ ಚಂದ್ರಶೇಖರ ಪ್ರಭು, ಜೆ.ಡಿ.ಎಸ್‌ನ ಜಯರಾಮ ಆಚಾರ್ಯ, ಕಾಂಗ್ರೆಸ್‌ನ ಬಿ.ವಿಜಯ ಮೊದಲಾದವರಿದ್ದರು.