ಕಾರ್ಮಿಕ ಸಂಘಟನೆಗಳಿಂದ ಜೈಲ್ ಭರೋ ಹೋರಾಟ

ಲೋಕಬಂಧು ನ್ಯೂಸ್ | ಉಡುಪಿ, ಆ.11
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸೋಮವಾರ ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಯಿತು 
ರಸ್ತೆ ತಡೆ ನಡೆಸಿದ ರೈತರು, ಕಾರ್ಮಿಕರು ಮತ್ತು ಕೂಲಿಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ, ಕಾರ್ಮಿಕರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಟ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾರ್ಮಿಕ ವರ್ಗವನ್ನು ಬಲಿಕೊಟ್ಟು ಬಂಡವಾಳಶಾಹಿಗಳ ಸೂಪರ್ ಲಾಭಕ್ಕೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.


ದೇಶದ ಯುವಜನರನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ಮೂಲಕ ಶೋಷಿಸುವ ನೀತಿ ಮುಂದೊಂದು ದಿನ ಜೆನ್-ಝಡ್ ಯುವಜನರ ಹೋರಾಟದ ಮಾದರಿಯಲ್ಲಿ ಬೃಹತ್ ಪ್ರತಿಭಟನೆಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಕಲ್ಲಾಗರ ಎಚ್ಚರಿಸಿದರು


ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ತಿಂಗಳುಗಟ್ಟಲೆ ವೇತನ ಬಾಕಿ ಉಳಿಸಿಕೊಂಡಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಗ್ರಂಥಾಲಯಗಳ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ನೀಡದಿರುವುದು ಖಂಡನೀಯ ಎಂದರು


ಯುಪಿಎ ಸರ್ಕಾರದ ಅವಧಿಯಲ್ಲಿ ಎಡಪಕ್ಷಗಳ ಒತ್ತಾಯ ಹಾಗೂ ಬೆಂಬಲದ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಜಾರಿಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ ನರೇಗ) ಬದಲಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿ-ಬಿಜಿ ರಾಮ್ ಜಿ ಯೋಜನೆಗೆ ಸಮರ್ಪಕ ಅನುದಾನ ನೀಡದೆ ಗ್ರಾಮೀಣ ಬಡವರ ಹಕ್ಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದವರು ಆರೋಪಿಸಿದರು.


ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಬೀಡಿ ಮತ್ತು ಕಟ್ಟಡ ಹಾಗೂ ಕಾರ್ಖಾನೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಸೈಯ್ಯದ್ ಅಲಿ, ರೈತರಿಗೆ ಬೆಂಬಲ ಬೆಲೆ ಖಾತರಿಪಡಿಸಬೇಕು ಹಾಗೂ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು


ಪ್ರತಿಭಟನೆಯಲ್ಲಿ ಸುಭಾಶ್ಚಂದ್ರ ನಾಯಕ್, ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ, ನಾಗರಾಜ್ ಕಾಂಚನ್, ಸರೋಜ, ಪ್ರಭಾಕರ್ ಕುಂದರ್, ಮೋಹನಚಂದ್ರ, ನಾಗೇಶ್, ರಮೇಶ್, ವಾಮನ ಪೂಜಾರಿ, ಮುರಳಿ, ರಂಗನಾಥ್ ಸಾರಿಕ್, ಶಾರದಾ, ಶರ್ಮಿಳಾ ಸೇರಿದಂತೆ ರೈತ ಕಾರ್ಮಿಕ ಕೂಲಿಕಾರರು ಭಾಗವಹಿಸಿದ್ದರು.
ಅಂಚೆ ಕಚೇರಿ ಎದುರಿನಿಂದ ರಸ್ತೆ ತಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಬಂಧಿಸಿದರು. ಬಳಿಕ ಬಂಧಿತರೆಲ್ಲರನ್ನು ಬಿಡುಗಡೆ ಮಾಡಲಾಯಿತು.


``ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ 1942ರ ಆ.8ರಂದು ಬ್ರಿಟಿಷರ ವಿರುದ್ಧ ಮೊಳಗಿದ `ಕ್ವಿಟ್ ಇಂಡಿಯಾ' ಚಳವಳಿಯ ಸ್ಪೂರ್ತಿಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಜನವಿರೋಧಿ ನೀತಿಗಳ ವಿರುದ್ಧ `ಕಾರ್ಪೊರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ' ಎಂಬ ಘೋಷಣೆಯೊಂದಿಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು''- ಸುರೇಶ್ ಕಲ್ಲಾಗರರಾಜ್ಯ ಕಾರ್ಯದರ್ಶಿ, ಸಿಐಟಿಯು