ಸಿಎಂ ಬಳಿಗೆ ಮೀನುಗಾರರ ನಿಯೋಗ

ಲೋಕಬಂಧು ನ್ಯೂಸ್ | ಉಡುಪಿ, ಆ.4
ಮತ್ಸ್ಯಕ್ಷಾಮದಿಂದ ಕಂಗೆಟ್ಟಿರುವ ಮೀನುಗಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲು ಮೀನುಗಾರರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ಅಧ್ಯಕ್ಷ ಮಂಜುನಾಥ್ ಸುಣಗಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀನುಗಾರರಿಗೆ ವಿವಿಧ ಸೌಲಭ್ಯಗಳನ್ನು ನೀಡಬೇಕು, 3 ಲಕ್ಷ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.


ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಮೀನುಗಾರ ಸಮುದಾಯದವರಿಗೆ ಆದ್ಯತೆ ನೀಡಲು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲೂ ಈ ಸಮಾಜಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಲಾಗುವುದು ಎಂದರು.


ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಿರೀಕ್ಷಾ ಮೆಂಡನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಮಹಾಬಲ ಕುಂದರ್, ನಿರೀಕ್ಷಾ ಮೆಂಡನ್ ಮತ್ತು ಉಪೇಂದ್ರ ಮೆಂಡನ್ ಉಪಸ್ಥಿತರಿದ್ದರು.