ಗೌತಮ್ ಅದಾನಿ-ಸಿಎಂ ಡಿಕೆಶಿ ಭೇಟಿ

ಲೋಕಬಂಧು ನ್ಯೂಸ್ | ಬೆಂಗಳೂರು, ಆ.23
ಇಲ್ಲಿನ ಸದಾಶಿವ ನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಉದ್ಯಮಿ ಗೌತಮ್ ಅದಾನಿ ಭಾನುವಾರ ಭೇಟಿ ನೀಡಿ ಕೆಲಹೊತ್ತು ಸಮಾಲೋಚನೆ ನಡೆಸಿದರು. 
ಅದಕ್ಕೂ ಮೊದಲು ಅದಾನಿ ಅವರು 'ಆರ್ಟ್ ಆಫ್ ಲಿವಿಂಗ್'ಗೆ ಭೇಟಿ ನೀಡಿದ್ದರು.


ಅದಾನಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಶಿವಕುಮಾ‌ರ್, ಇದೊಂದು ಸೌಜನ್ಯದ ಭೇಟಿ ಎಂದಿದ್ದಾರೆ.


ಶಿವಕುಮಾ‌ರ್ ಜೊತೆ ಸುಮಾರು 20 ನಿಮಿಷ‌ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಗೌತಮ್ ಅದಾನಿ ಚರ್ಚೆ ನಡೆಸಿದ್ದು ಬೆಂಗಳೂರಿನ ಉದ್ದೇಶಿತ ಸುರಂಗ ಮಾರ್ಗ ಯೋಜನೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.


ಉಪ ಮುಖ್ಯಮಂತ್ರಿಯಾಗಿದ್ದಾಗ ಶಿವಕುಮಾ‌ರ್ ಅವರು ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 16.75 ಕಿ.ಮೀ. ಉದ್ದದ ಉತ್ತರ- ದಕ್ಷಿಣ ಸುರಂಗ ರಸ್ತೆ ಯೋಜನೆ ರೂಪಿಸಿದ್ದು ಆ ಯೋಜನೆಗೆ ಅಂದಾಜು ರೂ. 17,698 ಕೋಟಿ ವೆಚ್ಚಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಟೆಂಡರ್‌ನಲ್ಲಿ ಅದಕ್ಕೂ ಮೀರಿದ ಬಿಡ್ ದಾಖಲಾಗಿದೆ. ಅತ್ಯಂತ ಕಡಿಮೆ ಬಿಡ್ ಸಲ್ಲಿಸಿರುವ ಅದಾನಿ ಎಂಟರ್‌ಪ್ರೈಸಸ್ ರೂ. 22,267 ಕೋಟಿ (ಶೇ 25.87) ನಮೂದಿಸಿದೆ. ಈ ಸಂಬಂಧ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಅದಾನಿ ಸಮೂಹದ ಒಡೆತನದ 'ಎಸಿಸಿ ಲಿಮಿಟೆಡ್' ಕಲ್ಬುಗಿ ಜಿಲ್ಲೆಯ ಚಿತ್ತಾಪುರದಲ್ಲಿ ಸಿಮೆಂಟ್‌ ಉತ್ಪಾದನೆಗೆ ಬಳಸುವ ಸುಣ್ಣದ ಕಲ್ಲಿನ ಗಣಿ ಹೊಂದಿದ್ದು ಗಣಿಗಾರಿಕೆಯ ಬಾಬು ಸುಮಾರು ರೂ. 850.21 ಕೋಟಿ ರಾಯಧನವನ್ನು ಕರ್ನಾಟಕ ಸರ್ಕಾರಕ್ಕೆ ಈ ಕಂಪನಿ ಪಾವತಿಸಬೇಕಾಗಿದೆ. ಎಸಿಸಿ ಲಿಮಿಟೆಡ್'ನ್ನು ಅದಾನಿ ಸಮೂಹ ವಶಕ್ಕೆ ಪಡೆದಾಗ ಈ ಮೊತ್ತವು ರೂ. 837 ಕೋಟಿಯಷ್ಟಿತ್ತು.


ಬಾಕಿ ತೀರುವಳಿ ಮಾಡದೇ ಇರುವ ಕಾರಣಕ್ಕೆ ಎಸಿಸಿ ಲಿಮಿಟೆಡ್ ವಿರುದ್ಧ ಕ್ರಿಮಿನಲ್‌ ಕಟ್ಟೆ ಹೂಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ವಿಷಯದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.


ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಹೆಜ್ಜೆ ಇಟ್ಟಿದ್ದು ಸ್ಥಳ ಆಯ್ಕೆ ಹಾಗೂ ಕಾರ್ಯಸಾಧ್ಯತಾ ವರದಿಯ ನಿರೀಕ್ಷೆಯಲ್ಲಿ ಸರ್ಕಾರ ಇದೆ. ವಿಮಾನ ನಿಲ್ದಾಣ ನಿರ್ಮಾಣ-ನಿರ್ವಹಣೆಯಲ್ಲಿ ಈಚೆಗಿನ ದಿನಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಅದಾನಿ ಸಮೂಹ ಬೆಂಗಳೂರಿನತ್ತಲೂ ದೃಷ್ಟಿ ನೆಟ್ಟಿದೆ.


ತೆಲಂಗಾಣದಲ್ಲಿನ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡಾ ಗೌತಮ್ ಅದಾನಿ ಜೊತೆ ಹೂಡಿಕೆ ಒಪ್ಪಂದ ಮಾಡಿದ್ದರು.


ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಪ್ರಧಾನಿ ನರೇಂದ್ರ ಮೋದಿ ಆಪ್ತ' ಎಂಬ ಕಾರಣಕ್ಕೆ ಉದ್ಯಮದಲ್ಲಿ ಬಹಳಷ್ಟು ವಿನಾಯಿತಿ ಪಡೆದಿದ್ದಾರೆ ಎಂದು ಗೌತಮ್ ಅದಾನಿ ವಿರುದ್ಧ ಆರೋಪ, ಟೀಕೆ ಮಾಡುತ್ತಿದ್ದಾರೆ. ಇದೀಗ ಡಿಕೆಶಿ ಮತ್ತು ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿಯಾಗಿದೆ.