ಲೋಕಬಂಧು ನ್ಯೂಸ್ | ಉಡುಪಿ, ಆ.22
ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ ಸುಮಾರು 25 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಂಗೀತ ಬಾಲಚಂದ್ರ ಅವರು ಇದೀಗ ಐತಿಹಾಸಿಕ ಸಾಧನೆ ಮಾಡಲು ಮುಂದಾಗಿದ್ದಾರೆ.
ಸಂಗೀತ ಕ್ಷೇತ್ರದ 25 ವರ್ಷಗಳ ಸುದೀರ್ಘ ಪಯಣದ ಹಿನ್ನೆಲೆಯಲ್ಲಿ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಪದಗಳನ್ನು ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಾಧನೆ ಮಾಡಲು ಮುಂದಾಗಿದ್ದಾರೆ. ಆಗಸ್ಟ್ 23ರ ಬೆಳಿಗ್ಗೆ 6:30ಕ್ಕೆ ಆರಂಭವಾಗುವ ದಾಸರಪದ ಗಾಯನ ಆ. 24ರ ಬೆಳಿಗ್ಗೆ 7:30ರ ತನಕ ನಡೆಯಲಿದೆ.
ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವ ಹಾಗೂ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ), ಅನೂಪ್ ಈವೆಂಟ್ಸ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಸಹಪ್ರಾಯೋಜತ್ವದಲ್ಲಿ ಮೂಡಿಬರುತ್ತಿರುವ ಈ ಗಾಯನ ಕಾರ್ಯಕ್ರಮಕ್ಕೆ ಪಂಚವಿಂಶತಿ ಎಂದು ಹೆಸರಿಡಲಾಗಿದೆ.
ಗಾಯಕಿಯೋರ್ವರು ಇದೇ ಮೊದಲ ಬಾರಿಗೆ ಇಷ್ಟು ಸುದೀರ್ಘ ಅವಧಿಗೆ 'ದಾಸರ ಪದ'ಗಳನ್ನೇ ಆಯ್ಕೆ ಮಾಡಿಕೊಂಡು ನಿರಂತರ 25 ಗಂಟೆಗಳ ಕಾಲ ಹಾಡುತ್ತಿರುವುದು ನಮ್ಮ ರಾಜ್ಯದ ಇತಿಹಾಸದಲ್ಲೇ ಮೊದಲ ಪ್ರಯತ್ನವಾಗಿದೆ.
ಪುತ್ತಿಗೆ ಶ್ರೀ ಶುಭಾಶಂಸನೆ
ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಈ 'ಪಂಚವಿಂಶತಿ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಯಾಗುವಂತೆ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾರೈಸಿದ್ದಾರೆ.
ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾವಿದೆಯನ್ನು ಪ್ರೋತ್ಸಾಹಿಸುವಂತೆ ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಿನಂತಿಸಿದ್ದಾರೆ.
ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯ
25 ಗಂಟೆ (1,500 ನಿಮಿಷ)ಗಳ ಕಾಲ ನಿರಂತರವಾಗಿ ನಡೆಯುವ ದಾಸರ ಪದ ಗಾಯನ.
ಸಂಪೂರ್ಣವಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಲಾದ 250 ದಾಸರ ಪದಗಳ ಪ್ರಸ್ತುತಿ.
ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಮತ್ತು ತಬಲಾ ವಾದಕರನ್ನು ಒಳಗೊಂಡ ಎರಡು ಪ್ರತ್ಯೇಕ ಸಹ-ಕಲಾವಿದರ ತಂಡಗಳಿಂದ ನಿರಂತರ ಲೈವ್ ಮ್ಯೂಸಿಕ್ ಸಾಥ್.
.jpg)
.jpg)