ಅತೃಪ್ತರ ಭಾವನೆ ಹೈಕಮಾಂಡ್ ಗಮನಕ್ಕೆ ತರುವೆ

ಲೋಕಬಂಧು ನ್ಯೂಸ್‌ | ಬೆಂಗಳೂರು, ಆ.5
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಅವಕಾಶ ಸಿಗದ ಆಕಾಂಕ್ಷಿಗಳಿಂದ ಅಸಮಾಧಾನ ಸ್ಫೋಟಗೊಳ್ಳುವುದು ಸಹಜ. ಯಾರೆಲ್ಲ ಪ್ರತಿಭಟನೆ ನಡೆಸುತ್ತಿದ್ದಾರೋ ಅವರ ಮನಸ್ಸಿನ ಭಾವನೆಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾನೂ ವೈಯಕ್ತಿಕವಾಗಿ ಅವರೊಂದಿಗೆ ಚರ್ಚಿಸಿ ಶಮನಗೊಳಿಸಲು ಪ್ರಯತ್ನಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಕೆಪಿಸಿಸಿ ಇಂದಿರಾ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ‌ ಮಾತಾಡಿದ ಅವರು, ನಮ್ಮ ವರಿಷ್ಠರು ಶೋಷಿತ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಕಾಶ ನೀಡಿದ್ದಾರೆ. ಪೌರಕಾರ್ಮಿಕ ದಂಪತಿ ಮಗ ಬಸವಂತಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ಬರೆದಿದೆ. ಇದು ಬಿಜೆಪಿಯವರಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.


ನಾವು ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿದ್ದು, ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಮಾನದಂಡ ಹಿನ್ನೆಲೆಯಲ್ಲಿ ಕಳೆದ ಬಾರಿ ಸಚಿವರಾದವರಲ್ಲಿ ಕೆಲವರಿಗೆ ಈ ಬಾರಿ ಅವಕಾಶ ನೀಡಿಲ್ಲ ಎಂದು ವಿವರಿಸಿದರು.


ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಜೊತೆ ಮಾತನಾಡಿದ್ದು, ಸಮಾಧಾನದಿಂದ ಇರಲು ಮನವಿ ಮಾಡಿದ್ದೇನೆ. ಇಬ್ಬರೂ ಗೆದ್ದು ಅವಕಾಶ ಸಿಗದಿದ್ದಾಗ ಬೇಸರ ಸಹಜ. ಮೈಸೂರು ಭಾಗದಲ್ಲಿ ತನ್ವಿರ್ ಸೇಥ್ ಅವರಿಗೆ ಅನ್ಯಾಯ ಆಗಿದೆ ಎಂದು ಒಪ್ಪುವೆ. ಆದರೆ,‌ ಅವರ ಸಮುದಾಯಕ್ಕೆ ಈಗಿನಷ್ಟು ಪ್ರಾತಿನಿಧ್ಯ ಬೇರೆ ಯಾವ ಸಂದರ್ಭದಲ್ಲೂ ಸಿಕ್ಕಿರಲಿಲ್ಲ.


ಗಾಯತ್ರಿ ಶಾಂತೇಗೌಡ ಕುರಿತು ನಾವು ಚರ್ಚೆ ಮಾಡುವ ವಿಚಾರವಲ್ಲ. ಮಂಕಾಳ ವೈದ್ಯ ಅವರಿಗೆ 3 ವರ್ಷ ಕಾಲ ಅವಕಾಶ ನೀಡಿದ್ದೇವೆ. ಮುಂದೆ ಬೇರೆ ಅವಕಾಶ ನೀಡುತ್ತೇವೆ ಎಂದು ಹರಿಪ್ರಸಾದ್ ಹೇಳಿದರು.