ಲೋಕಬಂಧು ನ್ಯೂಸ್ | ಉಜಿರೆ, ಆ.29
ನಮ್ಮ ಮನ ಮತ್ತು ಮನೆ ಪರಿಶುದ್ಧವಾಗಿ, ಸ್ವಚ್ಛ ಇದ್ದರೆ ಲಕ್ಷ್ಮಿ ಚಂಚಲೆ ಆಗಲಾರಳು ಎಂದು ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಹೇಳಿದರು.
ಕೊಲ್ಲಿ ದುರ್ಗಾದೇವಿ ದೇವಸ್ಥಾನ ವಠಾರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಹಿಳಾ ವಿಭಾಗ ಆಶ್ರಯದಲ್ಲಿ ಆ.28ರಂದು ಶುಕ್ರವಾರ ನಡೆದ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಲಕ್ಷ್ಮಿ ಚಂಚಲೆ ಎಂಬ ನಂಬಿಕೆ ಇದೆ. ಅಷ್ಟಲಕ್ಷ್ಮಿಯರ ಆರಾಧನೆಯಿಂದ ವಿಜಯಲಕ್ಷ್ಮಿ ಪ್ರಾಪ್ತಿ ಸಾಧ್ಯ. ಸಂಪತ್ತಿನ ರಕ್ಷಣೆಗೆ ಸಜ್ಜನರ ಸಂಗ ಅಗತ್ಯ ಎಂದು ಶ್ರದ್ಧಾ ಅಮಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಶುಭಾಶಂಸನೆಗೈದರು.
ಧಾರ್ಮಿಕ ಉಪನ್ಯಾಸ ನೀಡಿದ ಮುಂಡಾಜೆಯ ಅಶ್ವಿನಿ ಅರವಿಂದ ಹೆಬ್ಬಾರ್, ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದರಿಂದ ಸಮಾಜ ಸಂಘಟನೆಯೊಂದಿಗೆ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಗೌರವ ಹೆಚ್ಚಾಗುತ್ತದೆ ಎಂದರು.
ಜ್ಯೋತಿಲಕ್ಷ್ಮಿ ಸ್ವಾಗತಿಸಿದರು. ವನಿತಾ ಉಮೇಶ್ ವಂದಿಸಿದರು. ಮೀನಾಕ್ಷಿ ಮಹಾಬಲ ಗೌಡ ಕಾರ್ಯಕ್ರಮ ನಿರ್ವಹಿಸಿದರು.
