ದೆಹಲಿಯ ದಲಿತರ ಬಡಾವಣೆಗಳಲ್ಲಿ ಪೇಜಾವರ ಶ್ರೀ ಸಂಚಾರ

ಲೋಕಬಂಧು ನ್ಯೂಸ್ | ಉಡುಪಿ, ಆ.23
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತನಿರತರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೆಹಲಿಯ ರೋಹಿಣಿ ಕ್ಷೇತ್ರದ ಸೆಕ್ಟರ್ 4ರಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ವಾಸಿಸುವ ದಲಿತರ ಬಡಾವಣೆಗೆ ಭಾನುವಾರ ಭೇಟಿ ನೀಡಿದರು.
ಬಡಾವಣೆಯ ನಿವಾಸಿಗಳು ರಸ್ತೆಗಳನ್ನು ರಂಗೋಲಿಯಿಂದ ಅಲಂಕರಿಸಿ ಶ್ರೀಪಾದರಿಗೆ ಹೂಮಳೆಗರೆದು ಭಕ್ತಿಯಿಂದ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್ ಮತ್ತು ಸೇವಾಭಾರತಿ ಸಹಯೋಗದಲ್ಲಿ ಶ್ರೀಪಾದರು ದಲಿತ ಕಾಲನಿಗಳಿಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಂದಿನ ಮೂರು ಭಾನುವಾರಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಕ್ತಾರ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.
ಶ್ರೀರಾಮ ಮಂತ್ರದ ಜಯಘೋಷದೊಂದಿಗೆ ನೂರಾರು ಮಂದಿಯೊಂದಿಗೆ ಶ್ರೀಗಳು ಬಡಾವಣೆಯಲ್ಲಿ ಸಂಚರಿಸಿದರು. ಆರಂಭದಲ್ಲಿ 5 ಮನೆಗಳಿಗೆ ತೆರಳಿ ಮಠದ ವತಿಯಿಂದಲೇ ಒದಗಿಸಿದ ಶ್ರೀರಾಮ ಹಾಗೂ ಉಡುಪಿ ಶ್ರೀಕೃಷ್ಣನ ಫೋಟೋಗಳನ್ನಿಟ್ಟು ಸಣ್ಣ ದೀಪಗಳನ್ನು ಬೆಳಗಿದರು.
ಬಳಿಕ ಮನೆಯ ಪ್ರತಿಯೊಬ್ಬರ ಹೆಸರು, ಉದ್ಯೋಗ, ಶಿಕ್ಷಣ ಇತ್ಯಾದಿಗಳ ವಿವರ ಕೇಳಿದರು. ಮನೆ ಮಂದಿಗೆ ರಾಮಮಂತ್ರ ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು. ನಿತ್ಯ ರಾಮ- ಕೃಷ್ಣರ ಮಂತ್ರ ಜಪಿಸುವಂತೆ ಸೂಚಿಸಿದರು.
ಒಗ್ಗಟ್ಟು ಬಿಡದೇ ಸವಾಲು ಎದುರಿಸಿ
ಬಳಿಕ ಬಡಾವಣೆಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂದೇಶ ನೀಡಿದ ಶ್ರೀಪಾದರು, ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ ತೆರಳುವ ಬಗೆಯನ್ನು ವಿವರಿಸಿದರು. ಸನಾತನ ಧರ್ಮಕ್ಕೆ ಆಂತರಿಕವಾಗಿ ಮತ್ತು ಬಹಿರಂಗವಾಗಿ ಬಗೆಯ ಬಗೆಯ ಸವಾಲುಗಳು ಎದುರಾಗುತ್ತಿವೆ. ಆದರೆ ಎಂದಿಗೂ ನಮ್ಮ ಒಗ್ಗಟ್ಟನ್ನು ಬಿಡದೇ ಸವಾಲುಗಳನ್ನು ಎದುರಿಸಬೇಕು.
ರಾಮ-ಕೃಷ್ಣರ ಮಂತ್ರ ಮನೆ ಮಂದಿ ಸೇರಿಕೊಂಡು ನಿತ್ಯ ಜಪಿಸಬೇಕು. ಮೈ, ಮನಸ್ಸು ಬುದ್ಧಿ ಜೊತೆಗೆ ಪ್ರತೀ ಮನೆ ಮತ್ತು ಬಡಾವಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದೂ ರಾಮರಾಜ್ಯದ ಭಾಗವೇ ಆಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.


ಸ್ಥಳೀಯ ಶಾಸಕ ಕುಲವಂತ ರಾಣಾ, ವಿಹಿಂಪ ಮತ್ತು ಸೇವಾಭಾರತಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.