ಕಾನ್ಪುರದಲ್ಲಿ ವಿಮಾನ ಪತನ: ಉಡುಪಿ ಮೂಲದ ಪೈಲಟ್ ಮೃತ್ಯು

ಲೋಕಬಂಧು ನ್ಯೂಸ್ | ಉಡುಪಿ, ಆ.28
ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಮೂಲದ ತರಬೇತಿ ಪೈಲೆಟ್ ಅಭಿಷೇಕ್ ಪೂಜಾರಿ (22) ಮೃತಪಟ್ಟಿದ್ದಾರೆ.
ಆ.27ರಂದು ತರಬೇತಿ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಅಭಿಷೇಕ್ ಪೂಜಾರಿ ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡಿತ್ತು. ಇದೀಗ ಅವರ ಕುಟುಂಬದ ಹಿನ್ನೆಲೆ ಹಾಗೂ ಘಟನೆ ಕುರಿತು ಮಾಹಿತಿ ಲಭ್ಯವಾಗಿದೆ.


ಅಭಿಷೇಕ್ ಪೂಜಾರಿ ಅವರು ಉಡುಪಿ ಸಮೀಪದ ಹಿರಿಯಡ್ಕ ಬಳಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದವರಾಗಿದ್ದು, ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲೆಟ್ ತರಬೇತಿ ಪಡೆಯುತ್ತಿದ್ದರು. ಅವರ ತಂದೆ ಪ್ರಭಾಕರ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮುಂಬೈನಲ್ಲಿ ವಾಸವಾಗಿದ್ದಾರೆ.


ಅಭಿಷೇಕ್ ಆಗಾಗ ಕುಟುಂಬದೊಂದಿಗೆ ಕಡೇಬೆರ್ಕೆಯಲ್ಲಿರುವ ಸೋದರಮಾವ (ತಾಯಿಯ ಸಹೋದರ) ಜೀವನ್ ಕುಮಾರ್ ಅವರ ಮನೆಗೆ ಬಂದು ಹೋಗುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕುಟುಂಬದವರು ಮುಂದಿನ ಪ್ರಕ್ರಿಯೆಗಾಗಿ ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.