ಪ್ರಣವ್ ಹೆಗ್ಡೆ ಕುಟುಂಬದ ಮಾನವೀಯ ನಡೆ: ಅಂಗಾಂಗ ದಾನ, ಹಲವರಿಗೆ ಜೀವದಾನ!

ಲೋಕಬಂಧು ನ್ಯೂಸ್ | ಮಣಿಪಾಲ, ಆ.28
ಮೆದುಳು ನಿಷ್ಕ್ರಿಯಗೊಂಡ ಬಳಿಕವೂ ಹಲವರ ಬದುಕಿಗೆ ಬೆಳಕಾದ ಅಪರೂಪದ ಮಾನವೀಯ ಘಟನೆ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದಿದ್ದು, 41 ವರ್ಷದ ಪ್ರಣವ್ ಹೆಗ್ಡೆ ಅವರ ಕುಟುಂಬ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಹಲವು ರೋಗಿಗಳಿಗೆ ಹೊಸ ಬದುಕಿನ ಭರವಸೆ ನೀಡಿದೆ.
ಮಣಿಪಾಲ ನಿವಾಸಿ ಪ್ರಣವ್ ಹೆಗ್ಡೆ ಅವರನ್ನು ಆ.17ರಂದು ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಬಳಿಕ ಅವರನ್ನು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ ಎಂದು ಘೋಷಿಸಲಾಯಿತು. ತಜ್ಞ ವೈದ್ಯರ ತಂಡ ಎರಡು ಬಾರಿ ಪರೀಕ್ಷೆ ನಡೆಸಿ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿತು.
ಈ ವೇಳೆ ಪ್ರಣವ್ ಹೆಗ್ಡೆ ಕುಟುಂಬ ಸ್ವಯಂಪ್ರೇರಿತವಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿತು.


ಆಪ್ತನನ್ನು ಕಳೆದುಕೊಂಡ ನೋವಿನ ನಡುವೆಯೂ ಮತ್ತಷ್ಟು ಜೀವಗಳನ್ನು ಉಳಿಸುವ ಕುಟುಂಬದ ನಿರ್ಧಾರಕ್ಕೆ ಆಸ್ಪತ್ರೆಯ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಜೀವ ಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎಸ್ಒಟಿಟಿಒ) ನೇತೃತ್ವದಲ್ಲಿ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ಹಂಚಿಕೆ ಮಾಡಲಾಯಿತು.


ಪ್ರಣವ್ ಹೆಗ್ಡೆ ಅವರ ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಎರಡು ಕಾರ್ನಿಯಾಗಳನ್ನು ಅತ್ತಾವರದ ಕೆ.ಎಂ.ಸಿ.ಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಂದು ಮೂತ್ರಪಿಂಡವನ್ನು ಕಸಿ ಮಾಡಲು ಉಳಿಸಿಕೊಳ್ಳಲಾಯಿತು.


ಮಾಹೆ ಟೀಚಿಂಗ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಪ್ರಣವ್ ಹೆಗ್ಡೆ ಕುಟುಂಬದ ನಿರ್ಧಾರವನ್ನು ಶ್ಲಾಘಿಸಿ, ಅಂಗಾಂಗ ದಾನ ಒಬ್ಬರು ಮತ್ತೊಬ್ಬರಿಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಪ್ರಣವ್ ಹೆಗ್ಡೆ ಅವರ ಕುಟುಂಬ ಇತರರಿಗೆ ಜೀವ ನೀಡುವ ನಿರ್ಧಾರ ಕೈಗೊಂಡಿದೆ. ಈ ಶ್ರೇಷ್ಠ ಕಾರ್ಯಕ್ಕಾಗಿ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.