ಲೋಕಬಂಧು ನ್ಯೂಸ್ ಬೆಂಗಳೂರು, ಆ.4
ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ತಾಳ್ಮೆಯಿಂದ ಇರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದು ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ ಎಂದಿರುವ ಅವರು ಯಾರಾದರೂ ರಾಜೀನಾಮೆ ಸಲ್ಲಿಸಿದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವುದಾಗಿ ಹೇಳಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.5ರಿಂದ ಎಲ್ಲಾ ಸಚಿವರು ಜಿಲ್ಲೆಗಳಿಗೆ ತೆರಳಿ ಪ್ರವಾಸ ಕೈಗೊಳ್ಳಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದೇನೆ. ಸಮಯ ವ್ಯರ್ಥ ಮಾಡದೆ ಎಲ್ಲರೂ ಜನರ ಕೆಲಸಗಳಲ್ಲಿ ತೊಡಗಬೇಕೆಂದು ಸೂಚಿಸಿದ್ದೇನೆ ಎಂದರು.
ರಾಜೀನಾಮೆ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೊಡುವವರನ್ನು ತಡೆಯಲು ಆಗುವುದಿಲ್ಲ. ಪಕ್ಷ ಮತ್ತು ಅವರ ಭವಿಷ್ಯ ಬೇಕಾದರೆ ಇರುತ್ತಾರೆ ಎಂದರು.
ಧರಂ ಸಿಂಗ್, ಸಿದ್ದರಾಮಯ್ಯ ಕಾಲದಲ್ಲಿ ನನಗೂ ಮಂತ್ರಿ ಸ್ಥಾನ ತಪ್ಪಿತ್ತು. ನಾನು ತಾಳ್ಮೆಯಿಂದ ಇದ್ದೆ. ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಅವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಅವರೆಲ್ಲಾ ಮುಖ್ಯಮಂತ್ರಿಯಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾಳ್ಮೆಯಿಂದಿರಬೇಕು. ಎಲ್ಲಕ್ಕಿಂತ ಪಕ್ಷವೇ ಮುಖ್ಯ ಎಂದು ಸಿಎಂ ಡಿಕೆಶಿ ಹೇಳಿದರು.