ಲೋಕಬಂಧು ನ್ಯೂಸ್ | ಉಡುಪಿ, ಆ.23
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದಲ್ಲಿ ತುಂಬಾ ಅನುಕೂಲವಾಗಲಿದೆ. ವಕೀಲರು ಮತ್ತು ಕ್ಷಕಿದಾರರಿಗೆ ಮಾತ್ರವಲ್ಲದೆ ಜನಸಾಮಾನ್ಯರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೂ ಅದರಿಂದ ಪ್ರಯೋಜನ ಆಗಲಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಯು- ಆ್ಯಕ್ಟ್ ಸಮಿತಿ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿವಿಧ ಸಂಘ-ಸಂಸ್ಥೆಗಳ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ಕಕ್ಷಿದಾರರ ಪ್ರಯಾಣ ಮತ್ತು ಕಾನೂನು ಹೋರಾಟದ ವೆಚ್ಚ ಕಡಿಮೆಯಾಗಲಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲು ಸಾಧ್ಯ ಎಂದ ಹೆಗ್ಡೆ ಅವರು, ನ್ಯಾಯಾಲಯದ ವ್ಯಾಪ್ತಿಯನ್ನು ಸಮರ್ಪಕವಾಗಿ ನಿರ್ಧರಿಸಿ ಜನರಿಗೆ ನ್ಯಾಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದರು.
ಸಂಘಟಿತ ಹೋರಾಟ ಅಗತ್ಯ
ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯೆ ಶ್ಯಾಮಲಾ ಭಂಡಾರಿ ಮಾತನಾಡಿ, ಕರಾವಳಿಗೆ ಹೈಕೋರ್ಟ್ ಪೀಠ ಸ್ಥಾಪನೆಗೆ ಕೆಲವೊಂದು ಲಾಬಿಗಳು ಅಡ್ಡಿಯಾಗುತ್ತಿದೆ. ಅದನ್ನೆಲ್ಲ ಮೆಟ್ಟಿ ನಿಲ್ಲಬೇಕಾದರೆ ಜನಪ್ರತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರು ಒಂದಾಗಿ ಹೋರಾಟ ಮಾಡಬೇಕು. ಸರಕಾರ, ಮುಖ್ಯ ನ್ಯಾಯಮೂರ್ತಿ ಹಾಗೂ ಜನಪ್ರತಿನಿಧಿಗಳಿಗೆ ಕರಾವಳಿಗೆ ಪೀಠದ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಸಬೇಕು ಎಂದರು.
ಪಕ್ಷಭೇದ ಮರೆತು ಹೋರಾಟ
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಸಂದರ್ಭದಲ್ಲಿ ಮುಖ್ಯಮಂತ್ರಿಯ ಗಮನ ಸೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಮಧ್ಯಭಾಗದಲ್ಲಿ ಪೀಠ ಸ್ಥಾಪಿಸಬೇಕು ಎಂದರು.
ಸಮರ್ಪಕ ಲಾಭ ಸಾಧ್ಯ
ಮಂಗಳೂರು ವಿ.ವಿ. ಪ್ರಾದ್ಯಾಪಕಿ ಸವಿತಾ ಕೊರಗ ಮಾತನಾಡಿ, ಬುಡಕಟ್ಟು ಸಮುದಾಯವಾಗಿರುವ ಕೊರಗರು ಅನೇಕ ವರ್ಷಗಳಿಂದ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲಿಯೇ ಹೈಕೋರ್ಟ್ ಪೀಠವಾದರೆ ನಮ್ಮ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕುಗಳ ಸಮರ್ಪಕ ಲಾಭ ದೊರೆಯಲು ಸಾಧ್ಯವಾಗುತ್ತದೆ ಮತ್ತು ನ್ಯಾಯದ ವ್ಯವಸ್ಥೆ ಜನಸ್ನೇಹಿಯಾಗುತ್ತದೆ ಎಂದರು.
ಹೋರಾಟ ಒಂದೇ ದಾರಿ
ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜಿನಂತೆ ಹೈಕೋರ್ಟ್ ಪೀಠದ ವಿಚಾರದಲ್ಲೂ ಅನ್ಯಾಯ ಆಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಹೋರಾಟ ಒಂದೇ ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಡೀ ಜಿಲ್ಲೆಗೆ ಹೋರಾಟ ವಿಸ್ತರಣೆ
ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ, ಕರಾವಳಿಯ ಮೂರು ಜಿಲ್ಲೆಗಳ ಕೋರ್ಟ್‌ಗಳಲ್ಲಿರುವ ಲಕ್ಷಾಂತರ ದಾವೆಗಳು ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೇ ಸಾವಿರಾರು ಮಂದಿ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕರಾವಳಿಗೆ ಹೈಕೋರ್ಟ್ ಪೀಠ ಬಹಳಷ್ಟು ಅಗತ್ಯ ಇದೆ ಎಂದರು.
ಈ ಹೋರಾಟವನ್ನು ಇಡೀ ಜಿಲ್ಲೆಗೆ ವಿಸ್ತರಿಸುವ ಉದ್ದೇಶದಿಂದ ಮುಂದಿನ 15 ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುವುದು. ಅದೇ ರೀತಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ರೂಪಿಸಬೇಕು ಮತ್ತು ವಿದ್ಯಾರ್ಥಿಗಳ ಬಳಿ ಈ ಹೋರಾಟವನ್ನು ತೆಗೆದುಕೊಂಡು ಹೋಗಬೇಕು ಎಂದರು.
ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ ರಾವ್, ಕಾರ್ಕಳ ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾರಿ, ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿದರು.
ಸುರೇಶ್ ಕಾಮತ್ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ಡಿ'ಸೋಜ ವಂದಿಸಿದರು.
