ತುಳುನಾಡಿಗೆ ಕಯ್ಯಾರರ ಕೊಡುಗೆ ಅಪಾರ

ಲೋಕಬಂಧು ನ್ಯೂಸ್ | ಉಡುಪಿ, ಆ.2
ತುಳುನಾಡಿಗೆ ಗಡಿನಾಡ ಕವಿ ಕಯ್ಯಾರ ಕಿಂಞಣ್ಣ ರೈ ಕೊಡುಗೆ ಅಪಾರ ಎಂದು ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ನಗರದ ಮುಕುಂದಕೃಪಾ ಶಾಲೆಯಲ್ಲಿ ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಮತ್ತು ತುಳುಕೂಟ ಉಡುಪಿ ಸಹಯೋಗದಲ್ಲಿ ನಾಡೋಜ ಕಯ್ಯಾರ ಕಿಂಞಣ್ಣ ರೈ ನೆನಪಿನಲ್ಲಿ ನಡೆದ ಕಿನ್ಯ ಜೋಕ್ಲೆಡ್ದ್ ಸೊರ ಸಂಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕನ್ನಡದ ಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿ ನಾಯಕರಾಗಿ, ಕಾಸರಗೋಡು ವಿಲೀನ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕರಾಗಿ ಕಯ್ಯಾರ ಅವರು ನಿರಂತರವಾಗಿ ದುಡಿದಿದ್ದಾರೆ. ಅವರ ಕೊಡುಗೆಯನ್ನು ನಾಡಿನ ಜನತೆ ಎಂದಿಗೂ ಮರೆಯಬಾರದು ಎಂದರು.


ತುಳು ಭಾಷೆಯ ಉಳಿವಿಗಾಗಿ ಹೊಸ ಹೆಜ್ಜೆಯನ್ನಿಡುವ ನಿಟ್ಟಿನಲ್ಲಿ ಉಡುಪಿಯ ಎಲ್ಲಾ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಕಯ್ಯಾರ ಕಿಂಞಣ್ಣ ರೈ ಬರೆದ ಪದ್ಯವೊಂದನ್ನು ಜಯಕರ ಶೆಟ್ಟಿ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ತುಳುಕೂಟ ಉಪಾಧ್ಯಕ್ಷ ಹಾಗೂ ಕಿಂಞಣ್ಣ ರೈ ಅಳಿಯ ಭುವನಪ್ರಸಾದ್ ಹೆಗ್ಡೆ, ತುಳುಕೂಟದ ಗೌರವ ಸಲಹೆಗಾರ ವಿಶ್ವನಾಥ ಶೆಣೈ, ರೇಡಿಯೊ ಮಣಿಪಾಲದ ಕಾರ್ಯಕ್ರಮ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ವಿನುತಾ ಎಸ್. ನಾಯಕ್ ಮಾತನಾಡಿದರು.


ಕಾರ್ಯಕ್ರಮ ಸಂಚಾಲಕಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಭಾಷೆ ಸಂಸ್ಕೃತಿ ಉಳಿವಿಗಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದರು.


ತುಳುಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾವತಿ ವಿಶ್ವನಾಥ್ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಯಶೋದಾ ಕೇಶವ್ ನಿರೂಪಿಸಿದರು.
ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯ ಹೇಳಿ ರಂಜಿಸಿದರು.