ಲೋಕಬಂಧು ನ್ಯೂಸ್ | ಉಡುಪಿ, ಜು.28
ಉಡುಪಿಯ ಯುವಕ ರೋಹನ್ ಆರ್. ಬಾರಿತ್ತಾಯ (26) ಗ್ಲಾಸ್ಕೊ 2026 ಕಾಮನ್ವೆಲ್ತ್ ಗೇಮ್ಸ್'ನಲ್ಲಿ ಟೀಮ್ ಇಂಡಿಯಾದ ಫಿಸಿಯೊ ಮತ್ತು ರಿಕವರಿ ಥೆರಪಿಸ್ಟ್ ಆಗಿ ಆಯ್ಕೆಯಾಗಿದ್ದು, ಗ್ಲಾಸ್ಕೊಗೆ ತೆರಳಿದ್ದಾರೆ.
ರೋಹನ್ ಆರ್. ಬಾರಿತ್ತಾಯ ಅವರು ಇಂಗ್ಲೆಂಡ್‌ನ ಲ್ಯಾಟ್ರೋ ವಿ.ವಿ.ಯಿಂದ ಎಂಎಸ್.ಸಿ. (ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್) ವ್ಯಾಸಂಗ ಪೂರೈಸಿ ಉಡುಪಿ, ಮೈಸೂರು, ಮಂಗಳೂರು, ಮೂಡುಬಿದಿರೆ ಆಳ್ವಾಸ್'ನಲ್ಲಿ ಐಕ್ಯಂ ಸ್ಪೋರ್ಟ್ಸ್ ಸೈನ್ಸ್ ಸಂಸ್ಥೆ ಮೂಲಕ ಫಿಸಿಯೊ, ರಿಕವರಿ ಥೆರಪಿಸ್ಟ್ ಸೇವೆ ನೀಡುತ್ತಿದ್ದಾರೆ. ಅವರ ಅನುಭವವನ್ನು ಪರಿಗಣಿಸಿ ಗ್ಲಾಸ್ಕೊ 2026 ಕಾಮನ್ವೆಲ್ತ್ ಗೇಮ್ಸ್'ನಲ್ಲಿ ಟೀಂ ಇಂಡಿಯಾ ತಂಡದ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಸೇವೆ ಸಲ್ಲಿಸಲು ಇಂಡಿಯನ್ ಪ್ಯಾರಾ ಒಲಿಂಪಿಕ್ ಚೀಫ್ ಕೋಚ್ ಸತ್ಯನಾರಾಯಣ ಅವಕಾಶ ಒದಗಿಸಿದ್ದಾರೆ.
ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ 1ರಿಂದ 12ನೇ ತರಗತಿ ಓದಿ, ಮಣಿಪಾಲ ಮಾಹೆ ವಿ.ವಿ.ಯಲ್ಲಿ ಬಿಎಸ್.ಸಿ ಇನ್ ಸ್ಪೋರ್ಟ್ಸ್ ಸೈನ್ಸ್ ಪದವಿ ಪಡೆದಿದ್ದ ರೋಹನ್, ದಿಲ್ಲಿ ವಿ.ವಿ.ಯಲ್ಲಿ ಕ್ರೀಡಾ ಪ್ರತಿಭಾನ್ವೇಷಣೆ ತಂಡದ ನೇತೃತ್ವ ವಹಿಸಿದ್ದರು. ಪ್ಯಾರಾ ಕ್ರೀಡಾಳುಗಳಿಗೆ ಕಳೆದ ಒಂದು ವರ್ಷದಿಂದ ತರಬೇತಿ ನೀಡಿದ್ದಾರೆ.
ಕಠಿಣ ಪರಿಶ್ರಮ, ತ್ಯಾಗ, ಸಮರ್ಪಣೆ, ವೃತ್ತಿಪರ ನಿಷ್ಠೆಯ ಫಲವಾಗಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತ ತಂಡದೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ರೋಹನ್ ಅವರಿಗೆ ದೊರೆತಿದೆ.
ರೋಹನ್ ಅವರು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಪುತ್ರ.
ಮಗನನ್ನು ವೈದ್ಯನನ್ನಾಗಿ ಮಾಡಬೇಕೆನ್ನುವ ಗುರಿಯಿತ್ತು. ಆದರೆ, ರೋಹನ್ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಮಾಹೆಯಲ್ಲಿ ಕ್ರೀಡಾ ವಿಜ್ಞಾನ ಆಯ್ಕೆ ಮಾಡಿಕೊಂಡ. ನನಗೆ ಇಂಥದೊಂದು ಕೋರ್ಸ್ ಇದೆ ಎಂದೇ ತಿಳಿದಿರಲಿಲ್ಲ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
