ಲೋಕಬಂಧು ನ್ಯೂಸ್ ಉಡುಪಿ, ಆ.5
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಸನ್ಮತಿ ಜುಲೈ ತಿಂಗಳ ಸಂಚಿಕೆ ಬಿಡುಗಡೆ, ಸಂವಾದ ಹಾಗೂ ಪತ್ರಕರ್ತರಿಗೆ ಪಿಎಂಎಸ್.ಬಿವೈ (ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ) ನೋಂದಣಿ ಕಾರ್ಯಕ್ರಮ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಪತ್ರಿಕೆ ಬಿಡುಗಡೆ ಮಾಡಿದ ಉಡುಪಿ ಕೆನರಾ ಲೀಡ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಹರೀಶ್ ಅವರು ಆಹಾರ ಸಂಸ್ಕರಣೆ ಉದ್ಯಮಕ್ಕಾಗಿ ಯೋಜನೆ ಇದ್ದು, ಅದರಲ್ಲಿ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 500- 600 ಘಟಕಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ.
ಮುದ್ರಾ ಯೋಜನೆಯಲ್ಲಿ 10 ಲಕ್ಷ ರೂ.ಗಳೊಳಗೆ ಸಾಲ ಪಡೆದುಕೊಂಡರೆ ಮತ್ತು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ 7.5 ಲಕ್ಷ ರೂ.ವರೆಗಿನ ವಿದ್ಯಾಭ್ಯಾಸ ಸಾಲದಲ್ಲಿಯೂ ಯಾವುದೇ ಅಡಮಾನ ಇರಿಸುವ ಅಗತ್ಯ ಇಲ್ಲ ಎಂದರು.
ಎಟಿಎಂ ಕಾರ್ಡ್ ಹೊಂದಿದವರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಅವಕಾಶ ಇದೆ. ಮುದ್ರಾ ಸೇರಿದಂತೆ ವಿವಿಧ ಉದ್ಯಮಶೀಲತೆ ಯೋಜನೆಯಲ್ಲಿ ಪ್ರತಿ ವರ್ಷ ಉಡುಪಿ ಜಿಲ್ಲೆಯಿಂದ 3 ಸಾವಿರ ಕೋಟಿ ರೂ. ಸಾಲದ ಗುರಿಯನ್ನು ಎಲ್ಲ ಬ್ಯಾಂಕ್‌ಗಳಿಗೆ ನೀಡಲಾಗುತ್ತದೆ ಎಂದವರು ತಿಳಿಸಿದರು.
ಅಲ್ಲದೆ ಬ್ಯಾಂಕುಗಳಲ್ಲಿ ಸಿಗುವ ಕೃಷಿ ಸಾಲ, ಶಿಕ್ಷಣ ಸಾಲ ಸಹಿತ ವಿವಿಧ ಸಾಲಗಳು, ಠೇವಣಿ ಯೋಜನೆಗಳು ಹಾಗೂ ಜೀವ- ಆರೋಗ್ಯ- ಅಪಘಾತ ವಿಮೆ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಮಾಲೋಚಕಿ ಮೀರಾ ಇದ್ದರು.
ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು.
ಕೋಶಾಧಿಕಾರಿ ಹರೀಶ್ ಕುಂದರ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ವಂದಿಸಿದರು. ಸದಸ್ಯ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
