ಗೀತೆಯಿಂದ ಜೀವನ‌ ಮಾರ್ಗ‌

ಲೋಕಬಂಧು ನ್ಯೂಸ್ | ಹಿರಿಯಡಕ, ಆ.10
ಶ್ರೀಮದ್ಭಗವದ್ಗೀತೆ ಕೇವಲ ಹಿಂದೂಗಳ ಧರ್ಮಗ್ರಂಥವಲ್ಲ; ಅದು ಸಮಸ್ತ ಮಾನವ ಕುಲಕ್ಕೆ ಜೀವನ ಮಾರ್ಗ ತೋರಿಸುವ ವಿಶ್ವಮಾನವ ಗ್ರಂಥವಾಗಿದೆ. ಗೀತೆಯನ್ನು ಓದುವುದು ಮತ್ತು ಕಂಠಪಾಠ ಮಾಡುವುದರೊಂದಿಗೆ ಅದರ ಸಂದೇಶವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿ.ಹಿಂ.ಪ. ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದರು.
ಪುತ್ತಿಗೆ ಮೂಲಮಠದಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ತಾವು ನಡೆಸಿದ ಹೋರಾಟವನ್ನು ಸ್ಮರಿಸಿ, ಕಾರಾಗೃಹವಾಸದ ಅವಧಿಯಲ್ಲಿ ಸಂಪೂರ್ಣ ಶ್ರೀಮದ್ಭಗವದ್ಗೀತೆಯನ್ನು ಓದುವ ಅವಕಾಶ ಲಭಿಸಿತ್ತು. ಇದೀಗ ಪುತ್ತಿಗೆ ಶ್ರೀಪಾದರ ಕೋಟಿ ಗೀತಾಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸುವರ್ಣಾ ನದಿಯ ಪ್ರಶಾಂತ ಪರಿಸರದ ಪುತ್ತಿಗೆ ಗುರುಕುಲದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಭಾರತದ ಪ್ರಾಚೀನ ಗುರುಕುಲ ಪರಂಪರೆಗೆ ಅನುಗುಣವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಶಿಸ್ತು, ಸಾಧನೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ನೀಡಲಾಗುತ್ತಿದೆ. ಇಂದಿನ ಜಗತ್ತಿಗೆ ಕೇವಲ ಉದ್ಯೋಗ ಒದಗಿಸುವ ಶಿಕ್ಷಣವಷ್ಟೇ ಸಾಕಾಗದು. ಉತ್ತಮ ಚಾರಿತ್ರ್ಯ, ವಿವೇಕ, ಕರುಣೆ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಬೆಳೆಸುವ ಶಿಕ್ಷಣ ಅತ್ಯಗತ್ಯ ಎಂದು ಪ್ರತಿಪಾದಿಸಿದರು.


ನಮ್ಮೆಲ್ಲರ ವಿಚಾರ, ಮಾತು ಮತ್ತು ಕೃತಿಗಳು ಪರಿಶುದ್ಧವಾಗಿರಲಿ. ನಮ್ಮ ಜೀವನವೇ ಭಗವಂತನ ಮಂದಿರವಾಗಲಿ. ಶ್ರೀರಾಮನ ಆದರ್ಶ ಜೀವನ ನಡೆಸೋಣ ಎಂದು ಅಲೋಕ್ ಕುಮಾರ್ ಹೇಳಿದರು.


ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ದೇಶಭಕ್ತಿ, ಭಗವದ್ಗೀತೆ, ಯೋಗ ಮತ್ತು ಭಾರತೀಯ ಸಂಸ್ಕೃತಿ ಕುರಿತು ಮಾರ್ಗದರ್ಶನ ನೀಡಿದರು.


ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿದರು. ಸುಗುಣ ಶಾಲೆಯ ಪ್ರಮೋದ್ ನಿರ್ವಹಿಸಿದರು. ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯ ಡಾ.ಸುನಿಲ್ ಆಚಾರ್ಯ ವಂದಿಸಿದರು.
ಈ ಸಂದರ್ಭದಲ್ಲಿ ವಿ.ಹಿಂ.ಪ. ಪ್ರಾದೇಶಿಕ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ದ.ಕ.ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕೆ.ಆ‌ರ್., ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ್ ಮುದ್ರಾಡಿ, ಅರ್ಚಕ-ಪುರೋಹಿತ-ಮಠ-ಮಂದಿರ ಪ್ರಮುಖ್ ಗಿರೀಶ್ ತಂತ್ರಿ ಪೊಳಲಿ ಮೊದಲಾದವರಿದ್ದರು.