ಲೋಕಬಂಧು ನ್ಯೂಸ್ ಉಡುಪಿ, ಆ.5
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯ ವೇದಪಾಠ ಉಪನ್ಯಾಸಕ ಪಂಡಿತ ಪ್ರಹ್ಲಾದಾಚಾರ್ಯ ಕಾನಡೆ ಅವರು ಉಡುಪಿ ಭಂಡಾರಕೇರಿ ಮಠ ನೀಡುವ ಪ್ರತಿಷ್ಠಿತ 'ಅಥರ್ವೋದ್ಘೋಷ ವಾಕ್ಪತಿ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಅಥರ್ವವೇದವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅನೇಕ ವಿದ್ಯಾರ್ಥಿಗಳಿಗೆ ಅದನ್ನು ಕಂಠಪಾಠ ಮಾಡಿಸುವ ಮೂಲಕ ಬೋಧನಾ ಕ್ರಮದಲ್ಲಿ ಅಪೂರ್ವ ಸಾಧನೆ ಮಾಡಿರುವ ಕಾನಡೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಶ್ರೀಮಠದ ಪೀಠಾಧಿಪತಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಪ್ರಶಸ್ತಿ ಸನ್ಮಾನಪತ್ರ, ಸ್ಮರಣಿಕೆ, ನಗದು ಪುರಸ್ಕಾರ ಒಳಗೊಂಡಿದ್ದು, ಬ್ರಹ್ಮಾವರ ಸಮೀಪದ ಬಾರ್ಕೂರಿನ ಭಂಡಾರಕೇರಿ ಮೂಲಮಠದಲ್ಲಿ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವ ಸಂಭ್ರಮಾಚರಣೆ ಸಂದರ್ಭದಲ್ಲಿ 47ನೇ ಚಾತುರ್ಮಾಸ್ಯ ವ್ರತನಿಷ್ಠರಾಗಿರುವ ಶ್ರೀಪಾದರು ಆಗಸ್ಟ್ 7ರಂದು ನಡೆಯುವ ವಿದ್ವತ್ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡುವರು.
ಪುರುಷೋತ್ತಮ ಕಾನಡೆ ಮತ್ತು ಪುಷ್ಪಾ ದಂಪತಿ ಪುತ್ರ ಪ್ರಹ್ಲಾದಾಚಾರ್ಯ ಅವರು ಅಥರ್ವವೇದವನ್ನು 1994ರಿಂದ 2003ರ ವರೆಗೆ ಗುರುಗಳಾದ ಶ್ರೀಧರಾಚಾರ್ಯ ಮತ್ತು ದಿನಕರ ಜೋಶಿ ಅವರಲ್ಲಿ ಅಧ್ಯಯನ ಮಾಡಿದ್ದು, ಪ್ರಸ್ತುತ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯಲ್ಲಿ ಬೋಧಕರಾಗಿದ್ದಾರೆ.