ವ್ಯವಸ್ಥಿತ ಅದ್ದೂರಿ‌ ಉಡುಪಿ- ಉಚ್ಚಿಲ ಪಂಚಮ ವರ್ಷದ ದಸರಾ ಆಚರಣೆಗೆ ಸಿದ್ಧತೆ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಆ.9
ಭಕ್ತರು, ದಾನಿಗಳು ಹಾಗೂ ಸಮಾಜದ ಸರ್ವರ ಸಹಕಾರದೊಂದಿಗೆ ಪಂಚಮ ವರ್ಷದ ಈ ಬಾರಿಯ ಉಡುಪಿ- ಉಚ್ಚಿಲ ದಸರಾವನ್ನು ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಹಾಗೂ ವೈಭವೋಪೇತವಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಉಡುಪಿ- ಉಚ್ಚಿಲ ದಸರಾ ರೂವಾರಿ ನಾಡೋಜ ಡಾ.ಜಿ.ಶಂಕರ್ ಹೇಳಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಉಡುಪಿ- ಉಚ್ಚಿಲ ದಸರಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಕಳೆದ ನಾಲ್ಕು ವರ್ಷಗಳಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ಉಡುಪಿ- ಉಚ್ಚಿಲ ದಸರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ದೇಶ-ವಿದೇಶಗಳ ಭಕ್ತರ ಗಮನ ಸೆಳೆಯುತ್ತಿದ್ದು, ಐದನೇ ವರ್ಷದ ಉತ್ಸವವನ್ನು ಇನ್ನಷ್ಟು ವೈಭವದಿಂದ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.


ಈ ವರ್ಷದ ದಸರಾ ಉತ್ಸವದಲ್ಲಿ ಪ್ರತಿನಿತ್ಯ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ, ಕಲ್ಪೋಕ್ತ ಪೂಜೆ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸಾಂಸ್ಕೃತಿಕ ಕಾರ್ಯಕ್ರಮ, ವಿಶಿಷ್ಟ ವಸ್ತುಪ್ರದರ್ಶನ, ವಿದ್ಯುದ್ದೀಪಾಲಂಕಾರ, ನಿತ್ಯ ಅನ್ನಸಂತರ್ಪಣೆ ಹಾಗೂ ಸಂಜೆ ಉಪಾಹಾರದ ವ್ಯವಸ್ಥೆ ಇರಲಿದೆ.


ವಿಶೇಷವಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ಶ್ರೀ ಶಾರದಾಮಾತೆಯ ಛದ್ಮವೇಷ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಹುಲಿಕುಣಿತ ಸ್ಪರ್ಧೆ, ಕುಣಿತ ಭಜನೆ ಹಾಗೂ ಸಾಮೂಹಿಕ ದಾಂಡಿಯಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.


ಉದ್ಯಮಿ ಆನಂದ್ ಸಿ. ಕುಂದರ್ ಮಾತನಾಡಿ, ಬೆಲೆ ಏರಿಕೆಯಿಂದ ಕಾರ್ಯಕ್ರಮದ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸೂಕ್ತ ಗಮನಹರಿಸಿ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ಸಂಯೋಜಿಸಬೇಕಾಗಿದೆ. ಈ ವರ್ಷದ ದಸರಾ ಉತ್ಸವಕ್ಕೂ ತಮ್ಮ ಸಂಪೂರ್ಣ ಸಹಕಾರ‌‌ ಇದೆ ಎಂದು ಭರವಸೆ ನೀಡಿದರು.
ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಪಂಚಮ ವರ್ಷದ ಉಡುಪಿ- ಉಚ್ಚಿಲ ದಸರಾವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲು ಸರ್ವ ಭಕ್ತರು ಸಹಕಾರ ನೀಡುವಂತೆ ಮನವಿ ಮಾಡಿದರು.


ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್ ಮಲ್ಪೆ ನಿರೂಪಿಸಿ, ವಂದಿಸಿದರು.


ಕ್ಷೇತ್ರದ ಪ್ರಧಾನ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರಮುಖರಾದ ಮೋಹನ್ ಬೆಂಗ್ರೆ, ಶರಣ್ ಕುಮಾರ್ ಮಟ್ಟು,‌ಗಿರಿಧರ್ ಸುವರ್ಣ ಮೂಳೂರು, ಹರಿಯಪ್ಪ ಆರ್. ಕೋಟ್ಯಾನ್, ಯುವರಾಜ್ ಸಾಲಿಯಾನ್ ಮಸ್ಕತ್, ಕವಿತಾ ಕಾಂಚನ್, ಸುಗುಣ ಕರ್ಕೇರ, ಸುಧೀರ್ ಉಳ್ಳಾಲ, ಮನೋಜ್ ಕಾಂಚನ್ ಎರ್ಮಾಳ್, ಮನೋಜ್ ಉಳ್ಳಾಲ, ರಾಜೇಶ್ ಪುತ್ರನ್ ಉಳ್ಳಾಲ, ಸತೀಶ್ ಕುಂದರ್ ಮಲ್ಪೆ, ರವೀಶ್ ಎಸ್.ಕೊರವಡಿ, ಗೌತಮ್ ಕೋಡಿಕಲ್, ಗುಂಡು ಬಿ. ಅಮೀನ್, ಕಿದಿಯೂರ್ ವಾಸುದೇವ ಸಾಲ್ಯಾನ್ ಕಟಪಾಡಿ, ಸುಧಾಕರ್ ಕುಂದರ್ ಮಲ್ಪೆ, ದಿನೇಶ್ ಎರ್ಮಾಳ್, ಚೇತನ್ ಬೆಂಗ್ರೆ, ಶಿವರಾಮ್ ಕೋಟ, ಕಿರಣ್ ಕುಮಾರ್ ಪಿತ್ರೋಡಿ ಮೊದಲಾದವರಿದ್ದರು.