ಸುಗಮ ಮೀನುಗಾರಿಕೆ ಚಟುವಟಿಕೆಗೆ ಮಲ್ಪೆ ಬಂದರಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ

ಲೋಕಬಂಧು ನ್ಯೂಸ್ ಮಲ್ಪೆ, ಆ.5
ಪ್ರಸಕ್ತ ಸಾಲಿನ ಮೀನುಗಾರಿಕೆ ಋತು ಈಗಾಗಲೇ ಪ್ರಾರಂಭವಾಗಿದ್ದು, ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಶಾಸಕ ಯಶಪಾಲ್ ಸುವರ್ಣ ಸೂಚಿಸಿದರು.ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮೀನುಗಾರ ಮುಖಂಡರ ಸಭೆ ನಡೆಸಿದರು.


ಮಲ್ಪೆ ಬಂದರಿನ ಮುಖ್ಯ ಪ್ರವೇಶ ದ್ವಾರದ ಕಾಮಗಾರಿ ಪ್ರಗತಿಯಲ್ಲಿದ್ದು, ಆ ದ್ವಾರದ ಮೂಲಕ ವಾಹನ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಸೂಚಿಸಿರುವ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಂದರು ಭಾಗದಲ್ಲಿ ವಾಹನಗಳ ವ್ಯವಸ್ಥಿತ ಪಾರ್ಕಿಂಗ್ ನಿಟ್ಟಿನಲ್ಲಿ ಮುಂಜಾನೆ 3 ಗಂಟೆಯಿಂದಲೇ ಸಿಬ್ಬಂದಿ ನಿಯೋಜನೆ ಮತ್ತು ಬಂದರಿನ ಚಟುವಟಿಕೆಗಳ ನಿರ್ವಹಣೆಗೆ ಕರಾವಳಿ ಕಾವಲು ಪೊಲೀಸ್ ಇಲಾಖೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚಿಸಿದರು.


ಬಂದರು ಇಲಾಖೆ ಮೂಲಕ ಈಗಾಗಲೇ ಗುರುತಿಸಿರುವ  ಸ್ಥಳಗಳಲ್ಲಿ ಪೊಲೀಸ್ ಇಲಾಖೆಯ ಅಭಿಪ್ರಾಯ ಪಡೆದು ಆಧುನಿಕ ತಂತ್ರಜ್ಞಾನದ ಉತ್ತಮ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಲಹೆ ನೀಡಿದ ಶಾಸಕರು, ಮುಖ್ಯ ಪ್ರವೇಶ ದ್ವಾರದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಕಾಮಗಾರಿಗಾಗಿ ತೆಗೆದ ಮರಳನ್ನು ತಕ್ಷಣ ಪಾರ್ಕಿಂಗ್ ಪ್ರದೇಶದಿಂದ ತೆರವುಗೊಳಿಸುವಂತೆ ಸೂಚಿಸಿದರು.


ಬಂದರು ನಿರ್ವಹಣೆ ಮಾಡುತ್ತಿರುವ ಕೆ.ಎಫ್.ಡಿ.ಸಿ. ಸ್ವಚ್ಛತೆ ಹಾಗೂ ಭದ್ರತೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಮೀನುಗಾರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವಂತೆ ತಿಳಿಸಿದರು.


ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಡೀಸೆಲ್ ಪಾಸ್ ಬುಕ್ ನವೀಕರಣ ಪ್ರಕ್ರಿಯೆಯನ್ನು ಶೀಘ್ರ ನಡೆಸಿ ಮೀನುಗಾರಿಕಾ ಬೋಟುಗಳಿಗೆ ಡಿಸೇಲ್ ಪೂರೈಕೆಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಸಹಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಮೀನುಗಾರರ ಸಂಘದ ಸಹಯೋಗದಲ್ಲಿ ಅರ್ಹ ಮೀನುಗಾರರಿಗೆ ತಲುಪಿಸುವಂತೆ ಕ್ರಮ ವಹಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು,  ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಕಿಶೋರ್ ಡಿ.ಸುವರ್ಣ, ಮಧುಕರ್, ಕರುಣಾಕರ ಸಾಲ್ಯಾನ್, ದಯಾಕರ ಸುವರ್ಣ, ಸುರೇಶ್ ಬಿ.ಕುಂದರ್, ಪ್ರಕಾಶ್ ಬಂಗೇರ, ಗೀತಾ ಕರ್ಕೇರ, ಗೋಪಾಲ ಆರ್.ಕೆ., ನಾಗರಾಜ ಕುಂದರ್ ಹಾಗೂ  ಮೀನುಗಾರಿಕೆ, ಬಂದರು, ಕರಾವಳಿ ಕಾವಲು ಪೊಲೀಸ್, ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಇಲಾಖೆಗಳ ಅಧಿಕಾರಿಗಳು, ವಿವಿಧ ಮೀನುಗಾರಿಕಾ ಸಹಕಾರಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.