ಲೋಕಬಂಧು ನ್ಯೂಸ್ | ಉಡುಪಿ, ಆ.29
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬ್ರಹ್ಮಗಿರಿ ಉಡುಪಿ ಸಹಯೋಗದಲ್ಲಿ ಆ.28ರಂದು ಶುಕ್ರವಾರ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಯಿತು.
ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ರಕ್ಷಾಬಂಧನ ಕೇವಲ ರಾಖಿ ಕಟ್ಟುವ ಹಬ್ಬವಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಹಾಗೂ ಪರಸ್ಪರ ಕಾಳಜಿಯ ಪವಿತ್ರ ಬಾಂಧವ್ಯದ ಸಂಕೇತ. ರಾಖಿ ಕೇವಲ ಒಂದು ದಾರವಲ್ಲ, ಬದಲಾಗಿ ಸಂಬಂಧಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾವನಾತ್ಮಕ ಬಂಧವಾಗಿದ್ದು ಪರಸ್ಪರ ಸಹಕಾರ, ಸುರಕ್ಷತೆ ಹಾಗೂ ಮಾನವೀಯತೆಯ ಸಂದೇಶ ಸಾರುತ್ತದೆ ಎಂದರು.
ಇಂದಿನ ವೇಗದ ಹಾಗೂ ಒತ್ತಡಭರಿತ ಜೀವನ ಶೈಲಿಯಲ್ಲಿ ಮನಸ್ಸಿನ ನೆಮ್ಮದಿ, ಆತ್ಮಸ್ಥೈರ್ಯ ಹಾಗೂ ಸಕಾರಾತ್ಮಕ ಚಿಂತನೆಗಾಗಿ ಆಧ್ಯಾತ್ಮಿಕ ಚಿಂತನೆ, ಭಗವಂತನ ಸ್ಮರಣೆ ಮತ್ತು ಧ್ಯಾನಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾನವೀಯ ಮೌಲ್ಯಗಳು, ಆತ್ಮಜ್ಞಾನ ಹಾಗೂ ಧ್ಯಾನದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕಿ ಬಿ.ಕೆ.ಸುಮ ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ.ಅಶ್ವಿನಿ ಮತ್ತು ಬಿ.ಕೆ. ಮೋಹನ್, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಸಂಘದ ಸ್ಥಿರಾಸ್ತಿ ಮೌಲ್ಯ ಮಾಪಕ ಮುರಳೀಧರ ಶೆಟ್ಟಿ, ನಿರ್ದೇಶಕರಾದ ಎಲ್. ಉಮಾನಾಥ ಮತ್ತು ವಿನಯ್ ಕುಮಾರ್ ಟಿ.ಎ, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಮೊದಲಾದವರಿದ್ದರು.