ಲೋಕಬಂಧು ನ್ಯೂಸ್ | ಕಾಪು, ಆ.9
ಪ್ರಾಕೃತಿಕ ವಿಕೋಪ, ಅತಿವೃಷ್ಟಿ ಇತ್ಯಾದಿಗಳಿಂದ ಜನಸಾಮಾನ್ಯರಿಗೆ ಸಮಸ್ಯೆಗಳು ಉಂಟಾದಾಗ ಕೂಡಲೇ ಸ್ಪಂದಿಸುವ ಜೊತೆಗೆ ಶೀಘ್ರದಲ್ಲಿಯೇ ಪರಿಹಾರದ ಮೊತ್ತ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದರು.
ಶುಕ್ರವಾರ ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರೀ ಮಳೆಯಿಂದಾಗಿ ಪರಿಕರ, ಆಹಾರ ದಾಸ್ತಾನು ನಷ್ಟವಾದಲ್ಲಿ ತಕ್ಷಣ 5,500 ರೂ. ಪರಿಹಾರ ಧನ ವಿತರಿಸುವುದರೊಂದಿಗೆ ಸ್ವಾಭಿಮಾನದಿಂದ ಅವರು ಜೀವಿಸಲು ಅವಕಾಶ ಮಾಡಿಕೊಡಬೇಕು., ಪರಿಹಾರದ ಹಣವನ್ನು ನೀಡುವಾಗ ಅಧಿಕಾರಿಗಳು ಹೃದಯವಂತಿಕೆ, ಪ್ರಜ್ಞಾವಂತಿಕೆ ಹಾಗೂ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಂಡು ಜನ ಸಾಮಾನ್ಯರ ಕಷ್ಟಕಾಲದಲ್ಲಿ ಸ್ಪಂದಿಸಿ, ಸಹಾಯಹಸ್ತ ನೀಡಬೇಕು ಎಂದರು.
ಕಾಪು ತಾಲೂಕಿನಲ್ಲಿ ಪ್ರಸ್ತುತ 2020 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿವೆ. ಅನಾವೃಷ್ಟಿಯಿಂದಾಗಿ ಭತ್ತದ ಬೆಳೆಗೆ ಹಾನಿಯುಂಟಾಗಿದ್ದು, ಆ.20ರ ವರೆಗೆ ಮರುಬಿತ್ತನೆ ನಡೆಯಲಿದೆ. ಬೆಳೆ ಹಾನಿ ಬಗ್ಗೆ ನಿಖರ ಸಮೀಕ್ಷೆ ಕ್ರೋಢೀಕರಿಸಿ ಸರಕಾರಕ್ಕೆ ಸಲ್ಲಿಸಬೇಕು.
ಅಧಿಕ ಮಳೆಯಿಂದಾಗಿ ಅಡಿಕೆ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ರೋಗಗಳ ಭಾದೆ ಸಾಧ್ಯತೆ ಇದ್ದು, ಅಗತ್ಯ ಔಷಧಿ ಸಿಂಪಣೆಗೆ ರೈತರಿಗೆ ನೆರವಾಗಬೇಕು. ಪ್ರಸ್ತುತ ಜಿಲ್ಲೆಯಲ್ಲಿ 19,236 ರೈತರು ತೋಟಗಾರಿಕೆ ಬೆಳೆಗಳ ವಿಮೆ ಮಾಡಿಸಿದ್ದು, ಕಳೆದ ಬಾರಿಗೆ ಹೋಲಿಸಿದ್ದಲ್ಲಿ ಈ ಬಾರಿ 7,690 ಮಂದಿ ಹೆಚ್ಚಿನ ರೈತರು ವಿಮೆಗೆ ಒಳಪಟ್ಟಿದ್ದಾರೆ ಎಂದರು.
ಕಾಪು ತಾಲೂಕಿನ ಒಟ್ಟು 200 ಶಾಲೆಗಳ 660 ಕೊಠಡಿಗಳ ಪೈಕಿ 91 ಕೊಠಡಿಗಳ ದುರಸ್ತಿಯಾಗಬೇಕಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಕಂಪೌಂಡ್ ಬಳಿ ವಿದ್ಯಾರ್ಥಿಗಳು ಹತ್ತಿರ ಹೋಗದಂತೆ ಅಗತ್ಯ ಮುನ್ನೆಚ್ಚರಿಕೆವಹಿಸಲು ಸೂಚಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಾಗಿರುವ ಬಗ್ಗೆ ಮಾಹಿತಿ ಪಡೆದ ಅವರು, ಗುಣಮಟ್ಟದ ಶೂ, ಸಾಕ್ಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಆಹಾರ, ಮೊಟ್ಟೆ ಹಾಗೂ ಹಾಲು ಇತ್ಯಾದಿಗಳ ಗುಣಮಟ್ಟವನ್ನು ಜಿಲ್ಲಾ ಮಟ್ಟದ ಆಹಾರ ಅಂಕಿತ ಅಧಿಕಾರಿಗಳು ಪರೀಕ್ಷಿಸಬೇಕು ಎಂದರು.
ಮಳೆಯಿಂದಾಗಿ ಹಾಳಾದ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್, ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸೂಚನೆ ನೀಡಿದರು.
ಗಾಳಿ ಮಳೆಯಿಂದಾಗಿ 163 ವಿದ್ಯುತ್ ಕಂಬಗಳು ಉರುಳಿಬಿದ್ದು 31.71 ಲಕ್ಷ ರೂ.ನಷ್ಟು ಹಾನಿ ಉಂಟಾಗಿದೆ. ಲೈನ್ ಮ್ಯಾನ್ ಕೊರತೆ ಇದ್ದಲ್ಲಿ ಹೊರಗುತ್ತಿಗೆಗೆ ಪಡೆಯಬೇಕು. ಸಾರ್ವಜನಿಕರಿಂದ ದೂರು ಸ್ವೀಕರಿಸಲು ನಿರಂತರವಾಗಿ ಸಹಾಯವಾಣಿ ಚಾಲನೆಯಲ್ಲಿರಬೇಕು. ಆದ್ಯತೆಯಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ಸೂಚಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ವಿದ್ಯುತ್ ನಿರಂತರ ಸರಬರಾಜಿಗೆ ಸಮಸ್ಯೆ ಉಂಟಾಗುತ್ತಿವೆ. ಮಳೆ ಗಾಳಿಯಿಂದ ವಿದ್ಯುತ್ ಸಂಪರ್ಕದಲ್ಲಿ ಸಂಜೆಯ ವೇಳೆಯಲ್ಲಿ ವ್ಯತ್ಯಯ ಉಂಟಾದಾಗ ಸಾರ್ವಜನಿಕರಿಗೆ ಮುಂದಿನ ದಿನದ ಮಧ್ಯಾಹ್ನದ ವರೆಗೂ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ.
ತಾಲೂಕಿನಲ್ಲಿ ಮಳೆಯಿಂದಾಗಿ ಕೆಲವು ರಸ್ತೆಗಳು ತುಂಬಾ ಹಾಳಾಗಿದ್ದು ಶಾಲಾ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿಲ್ಲ. ಅಲ್ಲದೆ, ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯ ತುರ್ತಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
