ಶಾಂತರಾಜ್ ಐತಾಳರ 'ಕಾ ಪುರುಷ್ ಓ ಮಹಾಪುರುಷ್' ಅನಾವರಣ

ಲೋಕಬಂಧು ನ್ಯೂಸ್ | ಉಡುಪಿ, ಆ.4
ಪ್ರಸ್ತುತ ಜೆನ್-ಜಿ ತಲೆಮಾರಿನ ಕಾಲಘಟ್ಟದಲ್ಲಿದ್ದು, ಯುವ ಸಮುದಾಯಕ್ಕೆ ಸಮಾಜದ ಶ್ರೇಷ್ಠತೆ ಹಾಗೂ ಸಾಧಕರನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಹಿತಿ ಎಚ್.ಶಾಂತರಾಜ ಐತಾಳ ಅವರ 'ಕಾ ಪುರುಷ್ ಓ ಮಹಾಪುರುಷ್' ಕೃತಿ ಅತ್ಯಂತ ಉಪಯುಕ್ತ ಎಂದು ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಇಂಪು- ಗುಂಪು ಬಳಗದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃತಿ ಅನಾವರಣಗೊಳಿಸಿ ಮಾತನಾಡಿದರು.


ಸಮಾಜದಲ್ಲಿ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ಧಾವಂತದ ಯುಗದಲ್ಲಿ ಹಿರಿಯರ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಈ ಪುಸ್ತಕ ಒಟ್ಟು 80 ಪ್ರಮುಖ ವಿಷಯಗಳ ಕಿರು ಲೇಖನಗಳನ್ನು ಒಳಗೊಂಡಿದ್ದು, ಯುವಜನರಲ್ಲಿ ಕುತೂಹಲ ಮೂಡಿಸುವ ಜೊತೆಗೆ ಸಾಧಕರನ್ನು ಪರಿಚಯಿಸುವ ಸಾಹಸ ಮಾಡಿದೆ ಎಂದರು.


ಮುಖ್ಯ ಅಭ್ಯಾಗತರಾಗಿದ್ದ ಸಾಹಿತಿ ಡಾ.ಎನ್. ಭಾಸ್ಕರ ಆಚಾರ್ಯ ಮಾತನಾಡಿ, ಹಿಂದಿನ ಮಹಾಪುರುಷರ ಬದುಕಿನ ಸಾರವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದ್ದು, ಯುವ ಸಮುದಾಯಕ್ಕೆ ಓದಲು ಅನುಕೂಲವಾಗುವಂತೆ ಶಾಲೆಗಳಿಗೆ ಈ ಪುಸ್ತಕ ಹಂಚಬೇಕು. ಇಂದಿನ ಯುವಜನರು ಸುದೀರ್ಘ ಬರವಣಿಗೆಗಳಿಗಿಂತ ಸ್ಪಷ್ಟ ಹಾಗೂ ಚುಟುಕು ಬರಹಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದರು.


ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ನವನೀತ ಶೆಟ್ಟಿ ಕೃತಿಯ ಕುರಿತು ಮಾತನಾಡಿದರು.


ಕೀಲಿಮಣೆ ತಜ್ಞ ಪ್ರೊ.ಕೆ.ಪಿ. ರಾವ್, ಉದ್ಯಮಿ ರಮೇಶ್ ರಾವ್ ಉಡುಪಿ, ಡಾ‌. ಎಂ.ಆರ್. ಅಡಿಗ ಕುಂದಾಪುರ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ರವಿರಾಜ್ ಉಪಸ್ಥಿತರಿದ್ದರು.


ಲೇಖಕ ಎಚ್.ಶಾಂತರಾಜ ಐತಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸ್ವಪ್ನಾ ಜೆ. ಉಕ್ಕಿನಡ್ಕ ವಂದಿಸಿದರು. ಡಾ.ರವೀಂದ್ರನಾಥ ನಿರೂಪಿಸಿದರು.