ಸಿದ್ದರಾಮಯ್ಯ ನಿಗೂಢ ಮೌನ: 'ಕೈ' ಪಾಳೆಯದಲ್ಲಿ ಹೊಸ ಚರ್ಚೆ

ಲೋಕಬಂಧು ನ್ಯೂಸ್ | ಬೆಂಗಳೂರು, ಆ.5
ಪ್ರಸಕ್ತ ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅವರ ನಿಗೂಢ ಮೌನ, ಇದೀಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ನೇತೃತ್ವದ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೂ ಸಿದ್ದರಾಮಯ್ಯ ಗೈರಾಗಿದ್ದು, ನಂತರವೂ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡದಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.


ಸಚಿವ ಸಂಪುಟ ರಚನೆ ವೇಳೆ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದ ಕೆಲವು ಹೆಸರುಗಳಿಗೆ ಅವಕಾಶ ಸಿಗಲಿಲ್ಲ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಹಾಗಾಗಿ ತಮ್ಮ ಅಭಿಪ್ರಾಯಕ್ಕೆ ಹೈಕಮಾಂಡ್ ಸೂಕ್ತ ಗೌರವ ನೀಡಿಲ್ಲ ಎಂಬ ಬೇಸರದಿಂದಲೇ ಅವರು ಮೌನ ವಹಿಸಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ನಡುವೆ ನಡೆಯುತ್ತಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಇದುವರೆಗೆ ಹೊರಬಂದಿಲ್ಲ.


ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕನಾಗಿರುವ ಹಿನ್ನೆಲೆಯಲ್ಲಿ ಅವರ ಪ್ರತಿಯೊಂದು ನಡೆಗೂ ರಾಜಕೀಯ ಮಹತ್ವ ಸಿಗುತ್ತಿದೆ. ಪ್ರಮಾಣ ವಚನ ಸಮಾರಂಭದಲ್ಲಿ ಅವರ ಅನುಪಸ್ಥಿತಿ ಹಾಗೂ ನಂತರದ ಮೌನ ಪಕ್ಷದೊಳಗಿನ ಸಮೀಕರಣಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೂಕ್ತ ಸಮಯದಲ್ಲಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.


ಇನ್ನೊಂದೆಡೆ, ಕಾಂಗ್ರೆಸ್ ನಾಯಕತ್ವ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಲಾಗುತ್ತಿದ್ದು, ಎಲ್ಲ ಹಿರಿಯ ನಾಯಕರೂ ಒಗ್ಗಟ್ಟಿನಿಂದ ಸರ್ಕಾರವನ್ನು ಬಲಪಡಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.



ಆದರೂ ಸಿದ್ದರಾಮಯ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ಹೊರಬಾರದಿರುವುದು ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಗೌರವ ಕೊಡದಿದ್ದರೆ ಹೇಗೆ? ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮನ್ನಣೆ ತಂದುಕೊಟ್ಟವರು. ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಇಂಥವರಿಗೆ ಗೌರವ ಕೊಡದಿದ್ದರೆ ಅದು ಸರಿಯಾದುದಲ್ಲ ಎಂಬುದು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸಚಿವ ಸ್ಥಾನದಿಂದ ವಂಚಿತರಾದವರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.


ಅವರ ಮುಂದಿನ ನಡೆ ಏನಾಗಿರಬಹುದು ಎಂದು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ಪ್ರತಿಪಕ್ಷಗಳೂ ಕಾತುರದಿಂದ ಕಾಯುತ್ತಿವೆ!