ಲೋಕಬಂಧು ನ್ಯೂಸ್ ಉಜಿರೆ, ಆ.5
ಬೆಂಗಳೂರಿನ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಬುಧವಾರ ಧರ್ಮಸ್ಥಳಕ್ಕೆ ಆಗಮಿಸಿದ್ದು, ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಶ್ರೀಪಾದರು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಅವರು ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಶ್ರೀಪಾದರ ಪಾದಪೂಜೆ ನೆರವೇರಿಸಲಾಯಿತು. ಸುಪ್ರಿಯಾಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬಳಿಕ ಸಂಪ್ರದಾಯದಂತೆ ಶ್ರೀಪಾದರನ್ನು ಹೆಗ್ಗಡೆಯವರ ನಿವಾಸ (ಬೀಡು)ಕ್ಕೆ ಗೌರವಪೂರ್ವಕವಾಗಿ ಬರಮಾಡಿಕೊಂಡು ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಗೌರವಾರ್ಪಣೆ ಮಾಡಿದರು.
ಧರ್ಮಸ್ಥಳದ ಚತುರ್ವಿಧ ದಾನ ಪರಂಪರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳಿಗೆ ಕಾಯಕಲ್ಪ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು, ಮಹಿಳಾ ಸಬಲೀಕರಣ ಮೊದಲಾದ ಬಹುಮುಖಿ ಸೇವಾಕಾರ್ಯಗಳ ಬಗ್ಗೆ ಡಿ.ಹರ್ಷೇಂದ್ರ ಕುಮಾರ್ ಶ್ರೀಗಳಿಗೆ ಮಾಹಿತಿ ನೀಡಿದರು.
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಮಾಡುತ್ತಿರುವ ಲೋಕಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ದೇವಳ ಪಾರುಪತ್ಯೆಗಾರ ಲಕ್ಷ್ಮೀನಾರಾಯಣ ರಾವ್, ಮಣೆಗಾರ್ ವಸಂತ ಭಟ್ ಮತ್ತು ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮೊದಲಾದವರಿದ್ದರು.