ಲೋಕಬಂಧು ನ್ಯೂಸ್ | ಉಡುಪಿ, ಆ.10
ಭಾರತಕ್ಕೆ ವಿದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆ ಆಮದಾಗುತ್ತಿದ್ದು, ವಿದೇಶಿ ಅಡಿಕೆ ಕಳ್ಳ ಸಾಗಣೆಯನ್ನು ತಡೆಗಟ್ಟಿ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಸಂಸತ್'ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
ವಿದೇಶಗಳಿಂದ ಅದರಲ್ಲೂ ಇಂಡೋನೇಷ್ಯಾ, ಬಾಂಗ್ಲಾದೇಶ, ಮಯನ್ಮಾರ್ ಮುಂತಾದ ದೇಶಗಳಿಂದ ಸಮುದ್ರ ಮೂಲಕ ಅಕ್ರಮ ಸರಕು ಸರಬರಾಜಾಗುತ್ತಿದ್ದು, ಕೆಲವೆಡೆ ನೆರೆಯ ದೇಶಗಳಿಂದ ಕಳಪೆ ಅಡಿಕೆ ತಂದು ದೇಶಿಯ ಉತ್ಪನ್ನಗಳೊಂದಿಗೆ ಬೆರೆಸಿ ಮಾರಾಟ ಮಾಡುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಅದರಿಂದಾಗಿ ಕರ್ನಾಟಕ, ಕೇರಳ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ಅಡಿಕೆ ಬೆಳೆಗಾರರು ಅಕ್ರಮ ಅಡಿಕೆ ಆಮದಿನಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಮೂಲಕ ಅಕ್ರಮ ಅಡಿಕೆಯನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ ಎಂದು ಗ್ರಹ ಸಚಿವರಿಗೆ ಮನವರಿಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗೆ ಬಳಸುವ ಮೈಲುತುತ್ತು ಮತ್ತು ಕ್ರಿಮಿನಾಶಕಗಳಿಗೆ ಪ್ರಸ್ತುತ ಶೇ.18ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದು ಅಡಿಕೆ ಬೆಳೆ, ಕೃಷಿ ವ್ಯಾಪ್ತಿಗೆ ಬರುವುದರಿಂದ ಜಿಎಸ್‌ಟಿ ಶೇ.5ಕ್ಕೆ ಇಳಿಕೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮನವಿಗೆ ಸ್ಪಂದಿಸಿ ಅಕ್ರಮ ಅಡಿಕೆ ತಡೆಗಟ್ಟುವುದು ಮತ್ತು ಮೈಲುತುತ್ತಿಗೆ ಜಿಎಸ್‌ಟಿ ಇಳಿಕೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಮೊದಲಾದವರಿದ್ದರು.

