ಲೋಕಬಂಧು ನ್ಯೂಸ್ | ಉಡುಪಿ, ಆ.11
ಮಕ್ಕಳಲ್ಲಿ ಜಂತುಹುಳುಗಳ ಬಾಧೆಯಿಂದ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟಾಗಿ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಜಂತುಹುಳು ನಿವಾರಣೆಗಾಗಿ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುತ್ತಿದ್ದು, ಜಿಲ್ಲೆಯ 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆ ಸೇವಿಸುವುದರೊಂದಿಗೆ ಆರೋಗ್ಯಯುತ ಜೀವನ ನಡೆಸುವಂತೆ ಶಾಸಕ ಯಶಪಾಲ್ ಸುವರ್ಣ ಕರೆ ನೀಡಿದರು.
ನಗರದ ಸೈಂಟ್ ಸಿಸಿಲಿ ಪ್ರೌಢಶಾಲಾ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ವಿವಿಧ ಇಲಾಖೆಗಳು ಹಾಗೂ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯಲ್ಲಿ ಮಾತನಾಡಿದರು.
ಜಿಲ್ಲೆಯ 1ರಿಂದ 19 ವರ್ಷದೊಳಗಿನ 2,72,477 ಮಕ್ಕಳಿಗೆ ಅಲ್ಬೆಂಡಾಝೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆ. 17ರ ಮೋಪ್ ಅಪ್ ದಿನದಂದು ಬಾಕಿ ಉಳಿದ ಮಕ್ಕಳಿಗೆ ಮಾತ್ರೆ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ ಹುಬ್ಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭಯ, ಅಂಜಿಕೆಯಿಲ್ಲದೇ ಜಂತುಹುಳು ನಿವಾರಣಾ ಮಾತ್ರೆ ಸೇವಿಸಬಹುದು. ಅದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದರು.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್.ಪಿ.ವಿ ಲಸಿಕೆಯೊಂದೇ ಸಹಕಾರಿಯಾಗಿದ್ದು, 14ರಿಂದ 15 ವರ್ಷ ವಯಸ್ಸಿನೊಳಗಿನ ಇದುವರೆಗೂ ಎಚ್.ಪಿ.ವಿ. ಲಸಿಕೆ ಪಡೆಯದ ಹೆಣ್ಣು ಮಕ್ಕಳು ಲಸಿಕೆ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆರೋಗ್ಯ ಅತೀ ಮುಖ್ಯ. ಜಂತುಹುಳು ಮಕ್ಕಳ ಕರುಳನ್ನು ಸೇರಿ, ಪೌಷ್ಟಿಕಾಂಶ ಹೀರಿಕೊಂಡು ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟುಮಾಡುತ್ತದೆ. ದೇಹದಲ್ಲಿ ಅಗತ್ಯ ಪೌಷ್ಟಿಕಾಂಶದ ಕೊರತೆ ಉಂಟಾದಾಗ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೂ ಕುಂಠಿತವಾಗುವುದರೊಂದಿಗೆ ಮಕ್ಕಳ ಆಟ- ಪಾಠಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಜಂತುಹುಳದ ನಿವಾರಣೆಗೆ ಮಕ್ಕಳು ಮಾತ್ರೆ ಸೇವನೆಯಿಂದ ಮಾತ್ರವಲ್ಲದೇ, ಶೌಚಾಲಯ ಬಳಕೆ ಇತ್ಯಾದಿಗಳ ನಂತರ ಕಡ್ಡಾಯವಾಗಿ ಕೈತೊಳೆಯುವುದು, ಪರಿಸರದ ಸ್ವಚ್ಛತೆ ಕಾಪಾಡುವುದು, ಮಲ- ಮೂತ್ರ ವಿಸರ್ಜನೆಗೆ ಶೌಚಾಲಯವನ್ನೇ ಬಳಸುವುದು ಮತ್ತಿತರ ಸುರಕ್ಷತಾ ವಿಧಾನಗಳಿಂದ ಜಂತುಹುಳು ಬಾಧೆಯಿಂದ ರಕ್ಷಿಸಿಕೊಳ್ಳಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ಸೈಂಟ್ ಸಿಸಿಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪ್ರೀತಿ ಕ್ರಾಸ್ತಾ ಮೊದಲಾದವರಿದ್ದರು.
ಆರೋಗ್ಯ ಮೇಲ್ವಿಚಾರಣಾಧಿಕಾರಿ ಹೆಚ್ಚೇಶ್ ಎಚ್.ಎಸ್. ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ನಿರೂಪಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳದ ಮಾತ್ರೆಯನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
