ಲೋಕಬಂಧು ನ್ಯೂಸ್ | ಉಡುಪಿ, ಆ.29
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು ತನ್ನ ಅಪಾರ ಅನುಭವ, ಸರಳತೆ ಮತ್ತು ಸಮಾಜಮುಖಿ ಸೇವೆಯಿಂದ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದ ಜಾರ್ಜ್ ಸ್ಯಾಮ್ಯುಯೆಲ್ ನಿಧನ ಸಹಕಾರ ಕ್ಷೇತ್ರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಂಸ್ಥೆ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ, ಹಿರಿಯ ಲಯನ್ಸ್ ಸದಸ್ಯ ಜಾರ್ಜ್ ಸ್ಯಾಮ್ಯುಯೆಲ್ ನಿಧನದ ಹಿನ್ನೆಲೆಯಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಸಂಸ್ಥೆಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ನುಡಿನಮನ ಸಲ್ಲಿಸಿದರು.
ಭಾರತೀಯ ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಾರ್ಜ್ ಸ್ಯಾಮ್ಯುಯೆಲ್, ನಿವೃತ್ತಿಯ ನಂತರ ಲಯನ್ಸ್ ಸಂಸ್ಥೆ, ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಸಮುದಾಯ ಹಾಗೂ ಸೌಹಾರ್ದ ಸಮಿತಿಗಳ ಮೂಲಕ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಸೊಸೈಟಿಯ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ ಆಡಳಿತಾತ್ಮಕವಾಗಿ ಅವರು ನೀಡಿದ ಸಲಹೆ- ಮಾರ್ಗದರ್ಶನ ಸದಾ ಸ್ಮರಣೀಯ ಎಂದರು.
ಜಾರ್ಜ್ ಅವರ ಸಹೋದ್ಯೋಗಿ, ಸೊಸೈಟಿ ನಿರ್ದೇಶಕ ಸದಾಶಿವ ನಾಯ್ಕ್ ನುಡಿನಮನ ಸಲ್ಲಿಸಿ, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಜಾರ್ಜ್ ಸ್ಯಾಮ್ಯುಯೆಲ್ ತನ್ನ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ನಿವೃತ್ತಿಯ ನಂತರವೂ ಅಖಿಲ ಭಾರತ ಅಂಚೆ ಮತ್ತು ಆರ್.ಎಂ.ಎಸ್. ಪಿಂಚಣಿದಾರರ ಸಂಘದ ಮೂಲಕ ಪಿಂಚಣಿದಾರರ ಸಮಸ್ಯೆಗಳ ಪರಿಹಾರ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸಕ್ರಿಯವಾಗಿ ಶ್ರಮಿಸಿ ಅನೇಕರಿಗೆ ನೆರವಾಗಿದ್ದರು ಎಂದು ಸ್ಮರಿಸಿದರು.
ಸೊಸೈಟಿಯ ನಿರ್ದೇಶಕರು, ದಿವಂಗತರ ಪುತ್ರ ರಂಜನ್ ಮನೋಹರ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಲೆಕ್ಕಾಧಿಕಾರಿ ಅಶ್ವಿನಿ ಕುಮಾರ್ ಎಮ್. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.