ಕೇಂದ್ರದ‌ ಕಾರ್ಮಿಕ‌ ನೀತಿಗಳಿಂದ ಸಂಕಷ್ಟ

ಲೋಕಬಂಧು ನ್ಯೂಸ್ ಉಡುಪಿ, ಆ.9
ಉಡುಪಿ ಜಿಲ್ಲಾ ಬೀಡಿ ಆ್ಯಂಡ್ ಟೊಬ್ಯಾಕೊ ಲೇಬರ್ ಯೂನಿಯನ್‌ನ ವಾರ್ಷಿಕ ಮಹಾಸಭೆ ಭಾನುವಾರ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.ಮಹಾಸಭೆಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಲೇಬರ್ ಕೋಡ್'ಗಳಿಂದ ಬೀಡಿ ಕಾರ್ಮಿಕರು ಹಲವಾರು ಸಂಕಷ್ಟ ಎದುರಿಸುವಂತಾಗಿದೆ. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯದಿಂದ ಕೇಂದ್ರಕ್ಕೆ ಹೋಗಿರುವುದರಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ಸಿಗುತ್ತಿಲ್ಲ. ಬೀಡಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಹಾಗೂ ಡಿಸ್ಪೆನ್ಸರಿಗಳಲ್ಲಿ ಔಷಧಿ ಸಿಗುತ್ತಿಲ್ಲ. ಮನೆ ನಿರ್ಮಾಣದ ಸಹಾಯಧನ, ಆರೋಗ್ಯಕ್ಕೆ ನೆರವು ಕೂಡಾ ಸಿಗುತ್ತಿಲ್ಲ.


ಇನ್ನೊಂದೆಡೆ ರಾಜ್ಯ ಸರಕಾರ ಬೀಡಿ ಕಾರ್ಮಿಕರ ವೇತನ ಹೆಚ್ಚಳ ಮಾಡುತ್ತಿಲ್ಲ, ಬದಲಾಗಿ ಬೀಡಿ ಕಂಪನಿಗಳ ಮಾಲಿಕರ ಜೊತೆ ಕೆಲವು ಒಪ್ಪಂದ ಮಾಡಿಕೊಂಡಂತಿದೆ. ಹಾಗಾಗಿ ಬೀಡಿ ಕಾರ್ಮಿಕರು ಬೀದಿಪಾಲಾಗುವಂತಾಗಿದೆ ಎಂದು ವಿಷಾದಿಸಿದರು.


ಮುಖ್ಯ ಅತಿಥಿಗಳಾಗಿದ್ದ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್, ಜಿಲ್ಲಾ ಕೋಶಾಧಿಕಾರಿ ಬಲ್ಕೀಸ್ ಮಾತನಾಡಿದರು.


ಬೀಡಿ ಆ್ಯಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್. ಅಧ್ಯಕ್ಷತೆ ವಹಿಸಿದ್ದರು.


ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಜ್ಯೋತಿ ವಂದಿಸಿದರು.