ಯಕ್ಷಗಾನದ ಉಳಿವಿಗೆ ಮೇಳದ ಯಜಮಾನರೂ ಕಾರಣ

ಲೋಕಬಂಧು ನ್ಯೂಸ್ | ಉಡುಪಿ, ಆ.23
ಇಂದು ಯಕ್ಷಗಾನ ಕಲೆ ಉಳಿಯಲು ಮೇಳಗಳ ಯಜಮಾನರೂ ಕಾರಣ. ಆ ಕಾರಣಕ್ಕೆ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.
ಅಜ್ಜರಕಾಡು ಪುರಭವನದಲ್ಲಿ ಭಾನುವಾರ ನಡೆದ ಇಂದ್ರಾಳಿ ಯಕ್ಷಗಾನ ಕೇಂದ್ರ, ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್‌ ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ‌ ನಾಡೋಜ ಡಾ‌.ಜಿ.ಶಂಕರ್‌ ಮಾತನಾಡಿ, ಕಲಾವಿದರು ಅಪಾರ್ಥ ಸಂಭಾಷಣೆ ಮಾಡಬಾರದು. ತೆಂಕು ತಿಟ್ಟಿನ ಮೇಳದ ಯಜಮಾನರನ್ನೂ ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.


ಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆ  ಮಾತನಾಡಿ, ಡೇರೆ ಮೇಳಗಳ ಉಳಿವು ಪ್ರೇಕ್ಷಕರ ಕೈಯಲ್ಲಿದೆ ಎಂದರು.


ಕಾರ್ಯಕ್ರಮದಲ್ಲಿ ಯಕ್ಷಗಾನ ಮೇಳಗಳ ಯಜಮಾನ ವೈ. ಕರುಣಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಭುವನ ಪ್ರಸಾದ್ ಹೆಗ್ಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ‌.ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು.


ಸಭಾ ಕಾರ್ಯಕ್ರಮದ ಬಳಿಕ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು.