'ತ್ಯಾಗಮಯಿ ಮೊಳಹಳ್ಳಿ' ಅನಾವರಣ

ಲೋಕಬಂಧು ನ್ಯೂಸ್ ಮಂಗಳೂರು, ಆ.6
ಕರಾವಳಿಯ 'ಸಹಕಾರ ಪಿತಾಮಹ' ಎಂದೇ ಖ್ಯಾತರಾದ ಮೊಳಹಳ್ಳಿ ಶಿವರಾವ್ ಅವರಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆ. ಮೊಳಹಳ್ಳಿ ಅವರ ಕುರಿತಾಗಿ ಸಮಗ್ರ ಮಾಹಿತಿಯುಳ್ಳ ಪುಸ್ತಕ ಹೊರತಂದಿರುವುದು ಶ್ಲಾಘನೀಯ ಕಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ 'ಸಹಕಾರ ರತ್ನ' ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಕಿರಿಯ ನಿರೀಕ್ಷಕ ಹಾಗೂ ಪತ್ರಿಕಾ ರಂಗದಲ್ಲಿ ಕ್ರೀಡಾ ಬರಹಗಾರರಾಗಿ ಸುಮಾರು 3 ದಶಕಗಳಿಂದ ಗುರುತಿಸಿಕೊಂಡಿರುವ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ವಿರಚಿಸಿರುವ 'ತ್ಯಾಗಮಯಿ ಮೊಳಹಳ್ಳಿ' ಪುಸ್ತಕವನ್ನು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಅನಾವರಣಗೊಳಿಸಿ ಮಾತನಾಡಿದರು.


ಮೊಳಹಳ್ಳಿ ಶಿವರಾವ್ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಬೆಳೆಯಲು ಕಾರಣರಾದವರು. ಟೌನ್‌ ಬ್ಯಾಂಕ್ ಸ್ಥಾಪಕರು. ಅಂದಿನ ದಿನಗಳಲ್ಲಿ ಎತ್ತಿನಗಾಡಿಯಲ್ಲಿ ಸಂಚರಿಸಿ ಸಹಕಾರ ಕ್ಷೇತ್ರವನ್ನು ಬೆಳೆಸಿದವರು. ಅವರಿಂದಾಗಿ ಜಿಲ್ಲೆಯ ಸಹಕಾರ ಕ್ಷೇತ್ರ ಬೆಳೆದಿದೆ. 60 ವರ್ಷಗಳ ಕಾಲ ಅವರು ಸಹಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.


ಕುಂದಾಪುರದ ಮೊಳಹಳ್ಳಿಯಲ್ಲಿ ಹುಟ್ಟಿದರೂ ಅವರ ಕಾರ್ಯಕ್ಷೇತ್ರ ಪುತ್ತೂರು ಆಗಿತ್ತು. ವಕೀಲರಾಗಿದ್ದರೂ ಅವರು ಸಹಕಾರ ಕ್ಷೇತ್ರವನ್ನು ಬೆಳೆಸಿದ್ದಾರೆ ಎಂದು ಡಾ.ಎಂ.ಎನ್.ರಾಜೇಂದ್ರಕುಮಾರ್ ವಿವರಿಸಿದರು.


ವಿವಿಧ ಪತ್ರಿಕೆಗಳಲ್ಲಿ 4,500ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಜಗದೀಶ್ಚಂದ್ರ ಅಂಚನ್ ಅವರು ಕ್ರೀಡೆಗೆ ಮಹತ್ವ ನೀಡಿದ್ದಾರೆ. ಇದೀಗ ಮೊಳಹಳ್ಳಿ ಅವರ ಕುರಿತಾಗಿ ಪುಸ್ತಕ ಬರೆಯುವ ಮೂಲಕ ಅವರು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ದಾಖಲಿಸಿದ್ದಾರೆ ಡಾ.ಎಂ.ಎನ್‌. ರಾಜೇಂದ್ರಕುಮಾ‌ರ್ ಮೆಚ್ಚುಗೆ ವ್ಯಕ್ತಪಡಿಸಿದರು.


ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕ ಅಶೋಕ್‌ ಕುಮಾ‌ರ್ ಶೆಟ್ಟಿ, ಸಿಇಒ ಗೋಪಾಲಕೃಷ್ಣ ಭಟ್, ನಬಾರ್ಡ್ ಸಿಜಿಎಂ ಸಂಗೀತಾ ಕಾರ್ತಾ. ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಸಹಾಯಕ ನಿಬಂಧಕ ಸುರ್‌ಕುಮಾರ್, ಎಸ್‌.ಸಿಡಿಸಿಸಿ ಬ್ಯಾಂಕ್ ಮಹಾಪ್ರಬಂಧಕ, ಸುನಿಲ್ ಕುಮಾರ್ ಹೊಳ್ಳ, ಕೃತಿಯ ಲೇಖಕ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಉಪಸ್ಥಿತರಿದ್ದರು.


ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.