ಲೋಕಬಂಧು ನ್ಯೂಸ್ | ಬೆಂಗಳೂರು, ಆ.5
ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್‌ನಲ್ಲಿ ಸಂವಿಧಾನಾತ್ಮಕ ಹುದ್ದೆಗಳಿಗೆ ಶಾಸಕರ ಹೆಸರು ಪ್ರಕಟಿಸಿರುವುದು ಶಾಸನಸಭೆಯ ನಿಯಮಗಳ ಅಣಕವಾಗಿದೆ. ಕಾಂಗ್ರೆಸ್ ಪಕ್ಷ ಸಾಂವಿಧಾನಿಕ ಆಶಯಗಳನ್ನು ಹೇಗೆ ಬೇಕಾದರೂ ಗಾಳಿಗೆ ತೂರುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ ಎಂದು ಪ್ರಶ್ನಿಸಿರುವ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್, ಕಾಂಗ್ರೆಸ್‌ನಲ್ಲಿ ಲಕೋಟೆ ಸಂಸ್ಕೃತಿ ಹೋಗಿ ಈಗ ಲೆಟರ್ ಹೆಡ್ ಸಂಸ್ಕೃತಿ ವಕ್ಕರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಹೇಳಿಕೆ ನೀಡಿ ಸ್ಪೀಕರ್, ಉಪಸಭಾಧ್ಯಕ್ಷ, ಸಭಾಪತಿ, ಉಪಸಭಾಪತಿ ಸ್ಥಾನ ಸಂವಿಧಾನಾತ್ಮಕ ಹುದ್ದೆಗಳು. ಅವುಗಳ ಆಯ್ಕೆ ಪ್ರಕ್ರಿಯೆಗೆ ಅದರದ್ದೇ ಆದ ಮಾರ್ಗ ಹಾಗೂ ನಿಯಮಗಳಿವೆ. ಆದರೆ, ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್‌ನಲ್ಲಿ ಈ ಹುದ್ದೆಗೆ ಆಯ್ಕೆಯಾದವರ ಹೆಸರು ಪ್ರಕಟಿಸಿರುವುದು ಶಾಸನಸಭೆಯ ನಿಯಮಗಳ ಅಣಕವಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಮತ್ತು ಉಪಸಭಾಪತಿಗಳು ಆಯಾ ಸದನಗಳ ಸದಸ್ಯರಿಂದ ಆಯ್ಕೆಯಾಗಬೇಕೇ ವಿನಃ ಆಳುವ ಪಕ್ಷದ ಲೆಟರ್ ಹೆಡ್ ಮೂಲಕ ನೇಮಕವಾಗುವುದಲ್ಲ ಎಂದು ಹೇಳಿದ್ದಾರೆ.
