ಯಕ್ಷಗಾನ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ ನಿಧನ

ಲೋಕಬಂಧು ನ್ಯೂಸ್ | ತೀರ್ಥಹಳ್ಳಿ, ಆ.4
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ (75) ಆಗಸ್ಟ್ 2ರಂದು  ನಿಧನರಾದರು. ಅವರಿಗೆ ನಾಲ್ಕು‌ ಮಂದಿ ಗಂಡು ಮಕ್ಕಳಿದ್ದಾರೆ.
ನಾಡಿನ ಪ್ರಸಿದ್ಧ ಬಯಲಾಟ ಮೇಳಗಳಾದ ಮಂದಾರ್ತಿ, ಮಾರಣಕಟ್ಟೆ, ಶಿವರಾಜಪುರ, ಸೋಮವಾರಸಂತೆ, ಗೋಳಿಗರಡಿ ಮೇಳ ಸೇರಿದಂತೆ ಅನೇಕ ಮೇಳಗಳಲ್ಲಿ‌ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ಸೇವೆಗೈದಿದ್ದರು. ಎಲ್ಲಾ ರೀತಿಯ ಪೌರಾಣಿಕ ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿ ಕಲಾರಸಿಕರ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು.


ಯಕ್ಷಗಾನ ಕ್ಷೇತ್ರದ ಸೇವೆಯನ್ನು ಗಮನಿಸಿ ಅವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸನ್ಮಾನಕ್ಕೆ ಪಾತ್ರರಾಗಿದ್ದರು.


ಕೊಕ್ಕುಡ್ತಿ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್‌ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.