ಲೋಕಬಂಧು ನ್ಯೂಸ್ | ಬಂಟ್ವಾಳ, ಆ.8
ಯಕ್ಷಗಾನದ ಹಿರಿಯ ಸಂಘಟಕ ದಿ.ಬೋಳೂರು ದೋಗ್ರ ಪೂಜಾರಿ ಪುತ್ರ, ಖ್ಯಾತ ಸಾಹಿತಿ ದಿ.ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರ ಬೋಳೂರು ಮಧು ಕುಮಾರ್ (86) ಶನಿವಾರ ಇಲ್ಲಿಗೆ ಸಮೀಪದ ನರಿಕೊಂಬಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು.
ಮಧುಕುಮಾರ್ ಅವರು ತುಳು ಮತ್ತು ಕನ್ನಡ ಪ್ರಸಂಗಕರ್ತರಾಗಿ ಜನಪ್ರಿಯತೆ ಗಳಿಸಿದ್ದರು. ಅವರು ರಚಿಸಿದ 'ಸುದರ್ಶನ ವಿಜಯ' ಪ್ರಸಂಗ ಕಳೆದ ಸುಮಾರು ಐದು ದಶಕಗಳಿಂದ ವೃತ್ತಿ ಮೇಳ ಹಾಗೂ ಹವ್ಯಾಸಿ ವಲಯದಲ್ಲಿ ಪ್ರಸಿದ್ಧಿ ಪಡೆದಿದೆ. ಕಡುಗಲಿ ಕುಮಾರ ರಾಮ, ಏಕಾದಶಿ ದೇವಿ ಮಹಾತ್ಮ್ಯೆ, ಬಾಲೆ ನಾಗಮ್ಮ, ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ ಕೋಟಿ ಚೆನ್ನಯ ತುಳು ಪ್ರಸಂಗಗಳು ನಿತ್ಯ ನೂತನ ಪ್ರಸಂಗಗಳಾಗಿವೆ.
ಭಾಗವತರಾಗಿಯೂ ಅವರು ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.ಯಕ್ಷಗಾನ ವೇಷ ಭೂಷಣ ವ್ಯವಸ್ಥೆಯನ್ನೂ ಹೊಂದಿದ್ದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಮಧು ಕುಮಾರ್ ಅವರ ಕಲಾಸಾಧನೆಗಾಗಿ ಉಡುಪಿ ಯಕ್ಷಗಾನ ಕಲಾರಂಗ 2017ರಲ್ಲಿ ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮಧು ಕುಮಾರ್ ನಿಧನಕ್ಕೆ ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ್ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
