ವೈಜ್ಞಾನಿಕ ಆಯುರ್ವೇದ ಚಿಕಿತ್ಸೆಗೆ ಸಲಹೆ

ಲೋಕಬಂಧು ನ್ಯೂಸ್ | ಉಡುಪಿ
ರೋಗ ನಿರ್ಣಯ ಸಹಿತ ಆಯುರ್ವೇದೀಯ ಚಿಕಿತ್ಸಾ ಕ್ರಮವನ್ನು ವೈಜ್ಞಾನಿಕವಾಗಿ ನಡೆಸಬೇಕು. ಸ್ವಯಂ ನಿರೋಧಕ (ಆಟೋಇಮ್ಯೂನ್) ಕಾಯಿಲೆಗಳಲ್ಲಿ ಆಯುರ್ವೇದದ ಸಂಶೋಧನೆಗೆ ಒತ್ತುನೀಡಬೇಕಾಗಿದ್ದು, ಅದಕ್ಕಾಗಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನದೊಂದಿಗೆ ವೈಜ್ಞಾನಿಕ ಆವಿಷ್ಕಾರ ಅಗತ್ಯ ಎಂದು ನವದೆಹಲಿಯ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ಪ್ರೊ.ಡಾ.ಮನಿಷಾ ಉಪೇಂದ್ರ ಕೊಥೇಕರ್ ಹೇಳಿದರು.
ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ವೈಜ್ಞಾನಿಕ ಸಾಧ್ಯತೆಗಳ ಅನ್ವೇಷಣೆ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ರೋಗ ನಿರೋಧಕ ವಿಜ್ಞಾನಕ್ಕೆ ಬೆಸೆಯುವ ಉದ್ದೇಶದಿಂದ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಕ್ಷಮತ್ವಮ್ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸ್ವಯಂ ನಿರೋಧಕ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಯೊಂದಿಗೆ ಸಂಯೋಜಿಸುವ ಅಗತ್ಯವಿದೆ ಎಂದವರು ಪ್ರತಿಪಾದಿಸಿದರು.


ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ.ಡಾ.ಪ್ರಸನ್ನ ಎನ್. ರಾವ್, ಆಯುರ್ವೇದವನ್ನು ಜಾಗತಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕಿಸುವಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.


ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ.ಕೌಸ್ತುಭ್ ಉಪಾಧ್ಯಾಯ, ಕರ್ನಾಟಕ ಆಯುಷ್ ಇಲಾಖೆಯ ಆಯುಕ್ತ ಡಾ.ಸುನಿಲ್ ಪನ್ವಾರ್, ಆಯುರ್ವೇದ ರಷ್ಯಾ-ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆ ಡಾ.ಅನಿತಾ ಕರಿಲಿಯೊ ಅರ್ಕಾಸ್ ಉಪಸ್ಥಿತರಿದ್ದರು.


ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ ಅವರ ಸಂದೇಶ ವಾಚಿಸಲಾಗಿದ್ದು ಆಯುರ್ವೇದದ ಶಾಸ್ತ್ರೀಯ ಜ್ಞಾನವನ್ನು ಜಾಗತಿಕ ಆರೋಗ್ಯ ರಕ್ಷಣೆಯೊಂದಿಗೆ ಬೆಸೆಯುವ ಅನುವಾದಾತ್ಮಕ ಸಂಶೋಧನೆಯ ಮಹತ್ವವನ್ನು ಅವರು ಪ್ರತಿಪಾದಿಸಿದರು.

ಡಾ.ಪದ್ಮಕಿರಣ್ ಸಿ. ಅವರ 'ಪಂಚಕರ್ಮ ಶ್ಲೋಕ ಮಂಜರಿ' ಹಾಗೂ ಡಾ.ಅರ್ಹಂತ್ ಕುಮಾರ್ ಎ. ಅವರ ಸುಶ್ರುತ ಸಂಹಿತೆ ಆಂಗ್ಲ ಅವತರಣಿಕೆಯನ್ನು ಅನಾವರಣಗೊಳಿಸಲಾಯಿತು.


ಪ್ರೊ.ಎಮೆರಿಟಸ್ ಡಾ.ಶ್ರೀನಿವಾಸ್ ಹೆಜಮಾಡಿ ದಿಕ್ಸೂಚಿ ಭಾಷಣ ನೆರವೇರಿಸಿ ಆಟೋಇಮ್ಯೂನ್ ಕಾಯಿಲೆಗಳ ಸವಾಲುಗಳು, ರೋಗ ನಿರೋಧಕ ವ್ಯವಸ್ಥೆ ಹಾಗೂ ಆಯುರ್ವೇದದ ಸಂಶೋಧನೆಯ ಸಾಧ್ಯತೆಗಳ ಕುರಿತು ಮಾತನಾಡಿದರು.


ಹಾಸನ ಎಸ್.ಡಿ.ಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ. ಶೈಲಜಾ, ಬೆಂಗಳೂರು ಎಸ್.ಡಿ.ಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಜಗದೀಶ್ ಕೆ. ಹಾಗೂ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಸಂಶೋಧನ ಕೇಂದ್ರದ ಉಪಪ್ರಾಂಶುಪಾಲರಾದ ಡಾ.ನಿರಂಜನ್ ರಾವ್  ಮತ್ತು ಡಾ.ನಾಗರಾಜ್ ಎಸ್. ಮೊದಲಾದವರಿದ್ದರು.



ಆಟೋಇಮ್ಯೂನ್ ಕಾಯಿಲೆಗಳು, ರೋಗನಿರೋಧಕ ವಿಜ್ಞಾನ, ಸಂಶೋಧನಾ ವಿಧಾನಗಳು ಹಾಗೂ ಆಯುರ್ವೇದ ಚಿಕಿತ್ಸಾ ಸಾಧ್ಯತೆಗಳ ಕುರಿತು ಡಾ. ವಿಶ್ವೇಶ್ವರಯ್ಯ ಪ್ರಕಾಶ್, ಡಾ.ಭೂಷಣ್ ಪಟವರ್ಧನ್, ಡಾ.ಜಾರ್ಜ್ ಲೂಯಿಸ್ ಬೆರ್ಕಾರ್, ಡಾ.ರಾಮಮನೋಹರ್ ಪುತ್ರದತ್ ಹಾಗೂ ಡಾ.ಪ್ರಸನ್ನ ಎನ್. ಮೊಗಸಾಲೆ ವಿಚಾರ ಮಂಡಿಸಿದರು. ಎಸ್.ಡಿ.ಎಂ. ಕಲಾವೈಭವ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಪ್ರಸನ್ನ ಎನ್. ಮೊಗಸಾಲೆ ಹಾಗೂ ಡಾ.ಅರ್ಹಂತ್ ಕುಮಾರ್ ಎ. ಇದ್ದರು.


ಡಾ.ಅರುಣ್ ಹಾಗೂ ಡಾ. ಶುಭಾ ಪಿ.ಯು. ನಿರ್ವಹಿಸಿದರು. ಡಾ.ಅಶೋಕ್ ಕುಮಾರ್ ಬಿ.ಎನ್.  ವಂದಿಸಿದರು.


ದೇಶ- ವಿದೇಶಗಳಿಂದ ಆಗಮಿಸಿದ ತಜ್ಞರು, ಸಂಶೋಧಕರು, ವೈದ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.