ವಿದ್ಯಾರ್ಥಿ ಸಂಘ ಪದಗ್ರಹಣ: ಬಾಲ್ಕನಿ ಕುಸಿದು ವಿದ್ಯಾರ್ಥಿ ಮೆದುಳು ನಿಷ್ಕ್ರಿಯ

ಲೋಕಬಂಧು ನ್ಯೂಸ್ ಮಂಗಳೂರು
ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿ ಕುಸಿದು ಬಿದ್ದು ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ವಿದ್ಯಾರ್ಥಿ  ಗಂಭೀರ ಗಾಯಗೊಂಡು ಆತನ ಮೆದುಳು ನಿಷ್ಕ್ರಿಯಗೊಂಡಿದೆ.ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕಾಗಿ ವಿದ್ಯಾರ್ಥಿಗಳು ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆ ವೇಳೆ ಕಾರಿಡಾರ್‌ನಲ್ಲಿ ಅತಿಯಾದ ವಿದ್ಯಾರ್ಥಿಗಳ ಜನದಟ್ಟಣೆ ಉಂಟಾಗಿತ್ತು. ಹೊರಗೆ ನಿಂತಿದ್ದ ವಿದ್ಯಾರ್ಥಿಗಳು ದುರ್ಬಲವಾಗಿದ್ದ ಆಧಾರ ಗೋಡೆಗೆ ಒರಗಿ ನಿಂತಾಗ ಏಕಾಏಕಿ ಗೋಡೆ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಗಳು ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.


ಹಳೆಯಂಗಡಿಯ ಮಹಮ್ಮದ್ ಶಮಾಜ್ (16) ಮೆದುಳು  ನಿಷ್ಕ್ರಿಯಗೊಂಡ ವಿದ್ಯಾರ್ಥಿ. ಸೂರಿಂಜೆಯ ಮಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರಿನ ಹನೀಫ್ (23) , ಕಾವೂರಿನ ದಾವೂದ್ ಫರ್ಸಿನ್ ಅಹ್ಮದ್ (18), ಮಂಗಳೂರು ಕಸಬಾ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಗಾಯಗೊಂಡ ವಿದ್ಯಾರ್ಥಿಗಳು. ಅವರನ್ನು ನಗರದ ಹೈಲಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.