ಲೋಕಬಂಧು ನ್ಯೂಸ್ | ಧಾರವಾಡ
ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಪ್ರಯಾಣಿಸುತ್ತಿದ್ದ ಕಾರು ತಡಸ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಶ್ರೀಪಾದರ ಭುಜಕ್ಕೆ ಗಾಯವಾಗಿದ್ದು, ಚಾಲಕ ಸಹಿತ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾನಗರದ ಶುಶ್ರುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತರಾದಿ ಮಠದ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಜೋಶಿ ಶ್ರೀಗಳ ಚಿಕಿತ್ಸೆ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.
ಶ್ರೀಗಳ ಕಾರು ಅಪಘಾತವಾಗಿ ಶ್ರೀಗಳು ಗಾಯಗೊಂಡ ವಿಷಯ ತಿಳಿದು ನೂರಾರು ಭಕ್ತರು ಆಸ್ಪತ್ರೆ ಬಳಿ ಬಂದಿದ್ದು, ಶ್ರೀಗಳು ಆರಾಮಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಯಾರೂ ಆತಂಕಪಡಬೇಕಿಲ್ಲ ಎಂದು ಹೇಳಿ ಮಠದ ಆಡಳಿತಾಧಿಕಾರಿ ಭಕ್ತರನ್ನು ಸಮಾಧಾನಪಡಿಸಿ ವಾಪಸ್ ಕಳಿಸುತ್ತಿದ್ದಾರೆ.
ಶ್ರೀಗಳು ಆರೋಗ್ಯವಾಗಿದ್ದಾರೆ. ಭುಜಕ್ಕೆ ಸ್ವಲ್ಪ ಪೆಟ್ಟಾಗಿದೆ. ಆತಂಕಿತರಾಗಿ ಭಕ್ತರು ಆಸ್ಪತ್ರೆ ಕಡೆಗೆ ಬರಬಾರದು ಎಂದವರು ಮನವಿ ಮಾಡಿದ್ದಾರೆ.
ಭಾನುವಾರ ಸಂಜೆ ಧಾರವಾಡದಲ್ಲಿ ಚಾತುರ್ಮಾಸ್ಯ ಮುಗಿಸಿ ಸಿಮೋಲ್ಲಂಘನದ ಬಳಿಕ ಎಂ.ಕೆ. ಹುಬ್ಬಳ್ಳಿಗೆ ತೆರಳಿ ನರಸಿಂಹ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದ್ದರು. ಬಳಿಕ ಹಾವೇರಿ ಜಿಲ್ಲೆ ಸವಣೂರಿಗೆ ತೆರಳುವಾಗ ತಡಸ ಸಮೀಪ ಹೆದ್ದಾರಿಯಲ್ಲಿ ನಾಯಿಯೊಂದು ಕಾರಿಗೆ ಅಡ್ಡ ಬಂದಿದ್ದು, ಶ್ವಾನವನ್ನು ಬದುಕಿಸಲು ಚಾಲಕ ಕಾರು ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಶ್ರೀಗಳ ಅಪ್ತ ಮೂಲಗಳು ತಿಳಿಸಿವೆ.
