ಲೋಕಬಂಧು ನ್ಯೂಸ್ ಉಡುಪಿ
ಯಾವುದೇ ರೋಗಗಳ ತಡೆಗೆ ಜಾಗೃತಿ ಅತ್ಯಂತ ಅಗತ್ಯ. ಆದರ್ಶ ಆಸ್ಪತ್ರೆ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.ವಿಶ್ವ ಹೃದಯ ದಿನ ಅಂಗವಾಗಿ ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಉಚಿತ ಹೃದಯ ತಪಾಸಣಾ ಬೃಹತ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ, ಸೂಕ್ತ ದೇಹ ತೂಕ ನಿರ್ವಹಣೆ, ಮಧುಮೇಹ ನಿಯಂತ್ರಣ, ದಿನನಿತ್ಯದ ವ್ಯಾಯಾಮ, ಒತ್ತಡ ರಹಿತ ಜೀವನ ಹಾಗೂ ಸರಿಯಾದ ನಿದ್ರೆ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ ಎಂದರು.
ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ಮಾತನಾಡಿ ಸಮತೋಲಿತ ಆಹಾರ, ನಿರಂತರ ವ್ಯಾಯಾಮ, ಅಗತ್ಯ ನಿದ್ರೆ ಮತ್ತು ವಿಶ್ರಾಂತಿ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ.
ಸಾರ್ವಜನಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಹೃದ್ರೋಗ ತಜ್ಞರಾದ ಡಾ.ಶ್ರೀಕಾಂತ್ ಕೃಷ್ಣ, ಡಾ.ವಿಶು ಕುಮಾರ್ ಬಿ. ಹಾಗೂ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜನ್ ಡಾ.ಗುರುಪ್ರಸಾದ್ ಡಿ. ರೈ ಹೃದಯ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆರ್.ಬಿ.ಸಿ, ಇಸಿಜಿ, ಇಕೋ, ಟಿಎಂಟಿ ಹಾಗೂ ಲಿಪಿಡ್ ಪ್ರೊಫೈಲ್ ಪರೀಕ್ಷೆ ನಡೆಸಲಾಯಿತು.