ಲೋಕಬಂಧು ನ್ಯೂಸ್ | ಮಣಿಪಾಲ, ಸೆ.25
ಕೇವಲ 15 ದಿನಗಳ ಪ್ರಾಯದ ಹಸುಗೂಸಿನ ತಲೆಬುರುಡೆಯೊಳಗಿದ್ದ ಬೃಹತ್ ಮೆದುಳಿನ ಗೆಡ್ಡೆಯನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ.
ತಲೆಯ ಗಾತ್ರ ಅಸಹಜವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಆರ್.ಐ ಪರೀಕ್ಷೆಯಲ್ಲಿ ತಲೆಬುರುಡೆಯೊಳಗೆ ದೊಡ್ಡ ಗಾತ್ರದ ದ್ರವ್ಯರಾಶಿ ಪತ್ತೆಯಾಗಿದ್ದು, ತೀವ್ರ ಸ್ವರೂಪದ ಗೆಡ್ಡೆಯ ಸಾಧ್ಯತೆ ಕಂಡುಬಂದಿತ್ತು.
ನವಜಾತ ಶಿಶುವಿನ ರಕ್ತದ ಪ್ರಮಾಣ ಕಡಿಮೆ ಇರುವುದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿದ್ದು, ಪೋಷಕರಿಗೆ ಚಿಕಿತ್ಸೆಯ ಅಪಾಯಗಳನ್ನು ವಿವರಿಸಿದ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು.
ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ನಾಯಕ್ ನೇತೃತ್ವದ ತಂಡ ಯಶಸ್ವಿಯಾಗಿ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಿತು. ಬಳಿಕ ಮಗುವನ್ನು ಎನ್ಐಸಿಯುನಲ್ಲಿರಿಸಿ ತೀವ್ರ ನಿಗಾ ವಹಿಸಲಾಯಿತು.
ಒಂದು ವಾರದ ಬಳಿಕ ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
.jpg)
.jpg)