ಆಯುರ್ವೇದ‌ ಜೀವನ ಶೈಲಿ

ಲೋಕಬಂಧು ನ್ಯೂಸ್ | ಉಡುಪಿ, ಸೆ.24
ಆಯುರ್ವೇದ ಕೇವಲ ಒಂದು ವೈದ್ಯಕೀಯ ಪದ್ಧತಿಯಲ್ಲ, ಅದು ಜೀವನ ಶೈಲಿ. ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ಮುಂತಾದ ಚಿಕಿತ್ಸಾ ಪದ್ಧತಿಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ನಾಳಿನ ಬದುಕು ಬಹಳ ಸುಂದರವಾಗಿರುತ್ತದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಬ್ರಹ್ಮಗಿರಿ ಬಾಲಭವನದಲ್ಲಿ `ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ' ಘೋಷವಾಕ್ಯದೊಂದಿಗೆ ಬುಧವಾರ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಆಯುರ್ವೇದ ನಮ್ಮ ದೇಶದ ಸ್ವತ್ತು. ನಮ್ಮ ಋಷಿ- ಮುನಿಗಳ ಅನುಭವ ಮತ್ತು ತಪಸ್ಸಿನ ಫಲ. ಇಂದು ಎಲ್ಲಾ ವರ್ಗ ಮತ್ತು ಸಮುದಾಯದ ಜನರು ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಹೊಂದುತ್ತಿದ್ದಾರೆ. ಆಯುರ್ವೇದ ಅಥವಾ ಪ್ರಕೃತಿ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಪ್ರಚಾರ ದೊರಕಿಸುವಲ್ಲಿ ಇಂಥ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.


ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಅನವಶ್ಯಕವಾಗಿ ಮಾತ್ರೆ ನುಂಗುವ ಬದಲಿಗೆ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಂಡಾಗ ರೋಗವನ್ನು ಬುಡಸಮೇತ ನಿರ್ಮೂಲನೆ ಮಾಡಬಹುದು.


ಆರೋಗ್ಯವಂತರಾಗಿ ಬದುಕುವ ಆಸೆ ಎಲ್ಲರಿಗೂ ಇರುತ್ತದೆ. ಈ ನಿಟ್ಟಿನಲ್ಲಿ ಆಯುರ್ವೇದ ಚಿಕಿತ್ಸೆ ಸಹಕಾರಿ. ಕ್ಯಾನ್ಸರ್'ನಂಥ ಮಾರಕ ರೋಗಗಳ ಚಿಕಿತ್ಸೆಯಲ್ಲಿಯೂ ಆಯುರ್ವೇದ ಪದ್ಧತಿ ಪರಿಣಾಮಕಾರಿಯಾಗಿದೆ. ದೈನಂದಿನ ಜೀವನದಲ್ಲಿ ಮಾತ್ರೆ, ಸ್ಟೀರಾಯ್ಡ್'ಗಳ ಬಳಕೆ ಕಡಿಮೆ ಮಾಡಿ ಪ್ರಾಕೃತಿಕವಾದ ಚಿಕಿತ್ಸೆ ಅಳವಡಿಸಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಅಲೋಪಥಿ ಚಿಕಿತ್ಸೆ ಅಗತ್ಯ ಎಂದರು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ, ನಮ್ಮ ಹಿರಿಯರ ಕಾಲದಲ್ಲಿ ಒಂದೊಂದು ಗ್ರಾಮದಲ್ಲಿ ಕನಿಷ್ಟ ಒಬ್ಬರಾದರೂ ಆಯುರ್ವೇದ ಪಂಡಿತರು ಇರುತ್ತಿದ್ದರು. ಪ್ರತಿಯೊಬ್ಬರ ಅಡುಗೆ ಕೋಣೆಯಲ್ಲಿಯೇ ಮನೆಮದ್ದು ತಯಾರಾಗುತ್ತಿದ್ದ ಕಾಲವಿತ್ತು. ನಂತರದ ದಿನಗಳಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಿಂದಾಗಿ ತಕ್ಷಣದ ಪರಿಹಾರಕ್ಕೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ರೂಢಿಯಾಯಿತು. ಆದರೆ, ಈಗ ಮತ್ತೊಮ್ಮೆ ಆಯುರ್ವೇದ ಚಿಕಿತ್ಸಾ ಕ್ರಮದ ಮಹತ್ವ ಎಲ್ಲರಿಗೂ ಅರಿವಾಗಿದೆ. ಆಯುರ್ವೇದ ಶಾಶ್ವತ ಎನ್ನುವುದನ್ನು ಇದು ತೋರಿಸುತ್ತದೆ.


ತಳಮಟ್ಟದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಿಂದ ಪಡೆದ ಮಾಹಿತಿಯನ್ನು ಜನರಿಗೆ ತಲುಪಿಸಿದಾಗ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಶ್ರೀಧರ ಬಾಯಿರಿ ವಿಶೇಷ ಉಪನ್ಯಾಸ ನೀಡಿದರು.


ಹಿರಿಯ ವೈದ್ಯರಾದ ಡಾ.ಮಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷೆ ಡಾ. ಹೇಮಲತಾ ಮೊದಲಾದವರಿದ್ದರು.


ಡಾ.ವಿನಯ ಮತ್ತು ಡಾ.ಮಾನಸ ಪ್ರಾರ್ಥಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಸ್ವಾಗತಿಸಿದರು. ಡಾ.ಸರ್ವೋತ್ತಮ ಶೆಟ್ಟಿ ನಿರೂಪಿಸಿ, ಡಾ.ಪ್ರದೀಪ್ ಆರ್. ಶೆಟ್ಟಿ ವಂದಿಸಿದರು.