ಸೌಪರ್ಣಿಕಾ ನದಿ ಬಳಿ ಪ್ರೇಮಿಗಳ ಮೃತದೇಹ ಪತ್ತೆ

ಲೋಕಬಂಧು ನ್ಯೂಸ್ l ಬೈಂದೂರು
ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್‌ ಸೌಪರ್ಣಿಕಾ ನದಿ ಬಳಿ ಯುವಕ ಹಾಗೂ ಯುವತಿಯ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಚಾರ್ಸಲ್‌ ನಿವಾಸಿ ವಿಠಲ ನಾಯ್ಕ (36) ಹಾಗೂ ಹೊಸೂರು ಗ್ರಾಮದ ದರುಕೋಡು ನಿವಾಸಿ ಭವ್ಯಾ ಅಲಿಯಾಸ್‌ ನಿಶ್ಮಿತಾ (33) ಮೃತಪಟ್ಟವರು.


ಆಟೋ ಚಾಲಕನಾಗಿದ್ದ ವಿಠಲ ನಾಯ್ಕ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದ. ಈ ನಡುವೆ ಟೈಲರ್‌ ಕೆಲಸ ಮಾಡುತ್ತಿದ್ದ ಭವ್ಯಾಳೊಂದಿಗೆ ಆತನಿಗೆ ಪರಿಚಯವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.


ವಿಠಲ ನಾಯ್ಕ ತನ್ನ ಪತ್ನಿಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೆ.11ರಂದು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪತ್ನಿಯನ್ನು ಹತ್ಯೆ ಮಾಡುವ ಸಂಚಿನ ಭಾಗವಾಗಿ ಭವ್ಯಾಳನ್ನು ನರ್ಸ್‌ ಎಂದು ಪರಿಚಯಿಸಿ ಇಂಜೆಕ್ಷನ್‌ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಅದರಿಂದ ಅಸ್ವಸ್ಥಗೊಂಡ ಪತ್ನಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಪತ್ನಿ ಚೇತರಿಸಿಕೊಳ್ಳುತ್ತಿದ್ದಂತೆ ವಿಠಲ ಹಾಗೂ ಭವ್ಯಾ ಇಬ್ಬರೂ ಮೈಸೂರಿಗೆ ತೆರಳಿದ್ದರು ಎನ್ನಲಾಗಿದೆ. ಬಳಿಕ ನಾಪತ್ತೆಯಾಗಿದ್ದ ಅವರಿಬ್ಬರ ಮೃತದೇಹಗಳು ಇದೀಗ ಸೌಪರ್ಣಿಕಾ ನದಿ ಬಳಿ ಪತ್ತೆಯಾಗಿವೆ.


ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ಸುಮಾರು 15 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.


ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಕೋ ತಂಡವೂ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.