ಲೋಕಬಂಧು ನ್ಯೂಸ್ ಉಡುಪಿ, ಸೆ.11
ನಗರದ ಮಿಷನ್ ಕಂಪೌಂಡ್'ನಲ್ಲಿರುವ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಪರಿಸರ ಸುಸ್ಥಿರತೆಯಲ್ಲಿ ವಿಶ್ವದ ಅಗ್ರ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಜಾಗತಿಕ ಸಂಶೋಧನೆ ಮತ್ತು ದತ್ತಾಂಶ ಸಂಸ್ಥೆಯಾದ ಸ್ಪಾಟಿಸ್ಟಾ ಸಹಯೋಗದೊಂದಿಗೆ ನ್ಯೂಸ್ ವೀಕ್ ಪ್ರಕಟಿಸಿರುವ 'ವರ್ಲ್ಡ್ ಗ್ರೀನೆಸ್ಟ್ ಹಾಸ್ಪಿಟಲ್ಸ್ 2026' ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪತ್ರೆ '4-ಎಲೆಗಳ' ರೇಟಿಂಗ್ ಗಳಿಸಿದೆ.
36 ದೇಶಗಳ 4 ಸಾವಿರಕ್ಕೂ ಅಧಿಕ ಆಸ್ಪತ್ರೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಆಯ್ಕೆ ಮಾಡಲಾದ ವಿಶ್ವದಾದ್ಯಂತ 250 ಆರೋಗ್ಯ ಸಂಸ್ಥೆಗಳನ್ನು ಈ ಶ್ರೇಯಾಂಕ ಒಳಗೊಂಡಿದೆ.
ಏಷ್ಯಾ-ಪೆಸಿಫಿಕ್ ಪ್ರದೇಶದ ಕೇವಲ 46 ಆಸ್ಪತ್ರೆಗಳು ಹಾಗೂ ಭಾರತದ 8 ಆಸ್ಪತ್ರೆಗಳು ಮಾತ್ರ ಈ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವುದರಿಂದ, ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಗೆ ಈ ಸಾಧನೆ ವಿಶೇಷ ಮಹತ್ವದ್ದಾಗಿದೆ.
ಉಡುಪಿಯಂಥ ದ್ವಿತೀಯ ಶ್ರೇಣಿಯ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯೊಂದಕ್ಕೆ ಇದು ಗಮನಾರ್ಹ ಜಾಗತಿಕ ಮನ್ನಣೆಯಾಗಿದೆ. ನ್ಯೂಸ್ ವೀಕ್ ಜಾಗತಿಕ ವ್ಯಾಪ್ತಿ ಹೊಂದಿರುವ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದೆ.
ಲೊಂಬಾರ್ಡ್ ಆಸ್ಪತ್ರೆ ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳಿಗಾಗಿ 2026ರ ಹೆಲ್ತ್ ಸುಸ್ಥಿರತಾ ಶ್ರೇಷ್ಠತಾ ಪ್ರಶಸ್ತಿ ಪಡೆದಿರುವ ಬೆನ್ನಲ್ಲೇ ಈ ಮನ್ನಣೆ ದೊರೆತಿದ್ದು, ಸುಸ್ಥಿರ ಆರೋಗ್ಯ ಸೇವೆಯಲ್ಲಿ ಆಸ್ಪತ್ರೆಯ ಪ್ರಯತ್ನಗಳಿಗೆ ಮತ್ತಷ್ಟು ಹೆಗ್ಗುರುತು ನೀಡಿದೆ.
ಆಸ್ಪತ್ರೆಯ ಪರಿಸರ ಸ್ನೇಹಿ ಉಪಕ್ರಮಗಳನ್ನು ನಿರ್ದೇಶಕ ಡಾ.ಸುಶಿಲ್ ಜತನ್ನ ಅವರ ನೇತೃತ್ವದಲ್ಲಿ 2024ರಲ್ಲಿ ಆರಂಭಿಸಲಾದ 'ಇನ್‌ಸ್ಪೈರ್' ಹಸಿರು ಆಸ್ಪತ್ರೆ ಯೋಜನೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.