ಲೋಕಬಂಧು ನ್ಯೂಸ್ ಉಡುಪಿ, ಸೆ.7
ಜಗತ್ತಿನಲ್ಲಿ ಯಾವುದೇ ಕಲೆ ಜನರ ಮನಸ್ಸನ್ನು ಅರಳಿಸಿ ಸಂಸ್ಕಾರವಂತರನ್ನಾಗಿಸುತ್ತದೆ. ಉಡುಪಿ ಪರಿಸರ ಹಾಗೂ ಕೃಷ್ಣದೇವರ ಸಾನ್ನಿಧ್ಯ ಕಲಾರಾಧನೆಗೆ ಹೆಸರಾಗಿದೆ. ಉಡುಪಿ ಯಕ್ಷಗಾನ ಕೇಂದ್ರ ಕಳೆದ ಐದು ದಶಕಗಳಿಂದ ನಿರಂತರ ಕಲಾ ಸೇವೆಯಲ್ಲಿ ತೊಡಗಿಕೊಂಡಿದೆ. ಅಂತೆಯೇ ಎಂ.ಜಿ.ಎಂ. ಕಾಲೇಜು ಆವರಣ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. ಯಕ್ಷಗಾನ ಕಲೆಗೆ ಅಕಾಡೆಮಿಕ್ ಸ್ವರೂಪ ನೀಡಿ ತರಬೇತಿ ನೀಡುತ್ತಿದ್ದು ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಹೇಳಿದರು.ಇಂದ್ರಾಳಿ ಯಕ್ಷಗಾನ ಕೇಂದ್ರ ಹಾಗೂ ಎಂಜಿಎಂ ಕಾಲೇಜಿನ ಯಕ್ಷಗಾನ ಮತ್ತು ನಾಟಕ ರಂಗ ಹಾಗೂ ಐಕ್ಯೂಎಸಿ ಸಂಯುಕ್ತವಾಗಿ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದ ಪ್ರಸಕ್ತ ಶೈಕ್ಷಣಿಕ ಸಾಲಿನ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ, ಯಕ್ಷಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ ಉಪಸ್ಥಿತರಿದ್ದರು.
ಯಕ್ಷಗಾನ ಮತ್ತು ನಾಟಕ ರಂಗ ಸಂಯೋಜಕ ರಾಘವೇಂದ್ರ ತುಂಗ ಕೆ. ಸ್ವಾಗತಿಸಿ, ನಿರೂಪಿಸಿದರು. ಸಹಸಂಯೋಜಕ ಶ್ರೀಧರ ರಾವ್ ಸಹಕರಿಸಿದರು.