ಲೋಕಬಂಧು ನ್ಯೂಸ್ | ಉಡುಪಿ, ಸೆ.24
ಕಳೆದ ಹತ್ತು ದಿನಗಳಿಂದ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದ ಕನ್ನರ್ಪಾಡಿ- ಕಿನ್ನಿಮೂಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿಕ ಗಣಪತಿ ಕಟ್ಟೆಯಲ್ಲಿ ಪೂಜಿಸಲ್ಪಟ್ಟ ಧೂಮ್ರವರ್ಣ ಗಣೇಶನ ವಿಸರ್ಜನಾ ಶೋಭಾಯಾತ್ರೆ ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆದು, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಳದ ಕಣ್ವ ಪುಷ್ಕರಿಣಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ರಾತ್ರಿ 7ರಿಂದ 7.30ರ ಸುಮಾರಿಗೆ ಗಣೇಶನಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ ಆಕರ್ಷಕವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಗಣೇಶನ ವಿಗ್ರಹವನ್ನು ಇರಿಸಲಾಯಿತು. ಬಳಿಕ ಆರಂಭಗೊಂಡ ಶೋಭಾಯಾತ್ರೆಯುದ್ದಕ್ಕೂ 'ಗಣಪತಿ ಬಪ್ಪಾ ಮೋರೆಯಾ' ಎಂಬ ಘೋಷಣೆ ಮುಗಿಲು ಮುಟ್ಟಿತ್ತು.
ಕನ್ನರ್ಪಾಡಿಯಿಂದ ಫಯರ್ ಸ್ಟೇಷನ್ ರಸ್ತೆ, ಬ್ರಹ್ಮಗಿರಿ ವೃತ್ತ ಜೋಡುಕಟ್ಟೆ- ಕಿನ್ನಿಮೂಲ್ಕಿ ಮುಖ್ಯರಸ್ತೆ ಮೂಲಕ ಸಾಗಿದ ಮೆರವಣಿಗೆ ಬಲಾಯಿಪಾದೆ, ಸ್ವಾಗತ ಗೋಪುರ ಮಾರ್ಗವಾಗಿ ಮತ್ತೆ ಕನ್ನರ್ಪಾಡಿ ತಲುಪಿತು.
ಮೆರವಣಿಗೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಕೆಲಹೊತ್ತು ಕ್ರೇನ್‌ನ ಸಹಾಯದಿಂದ ಕೃಷ್ಣಮೂರ್ತಿ ಆಚಾರ್ಯ ಅವರು ಗಣೇಶನ ವಿಗ್ರಹಕ್ಕೆ ಪುಷ್ಪವೃಷ್ಟಿ ನೆರವೇರಿಸಿದರು.
ಶ್ರೀರಾಮ, ಅಯ್ಯಪ್ಪ, ಹನುಮಾನ್ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಬಿಂಬಿಸುವ ಕಲಾಕೃತಿಗಳು ಮತ್ತು ಆಕರ್ಷಕ ಟ್ಯಾಬ್ಲೊಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ಡಿಜೆ ಹಾಗೂ ವಿವಿಧ ವಾದ್ಯಗಳ ಸದ್ದಿಗೆ ಯುವಕ- ಯುವತಿಯರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.
ರಸ್ತೆಯುದ್ದಕ್ಕೂ ಜಮಾಯಿಸಿದ್ದ ಭಕ್ತರು ಹಾಗೂ ಸಾರ್ವಜನಿಕರು ಗಣೇಶನ ದಿವ್ಯ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗಣೇಶನ ವಿಸರ್ಜನಾ ಶೋಭಾಯಾತ್ರೆ ಕಿನ್ನಿಮೂಲ್ಕಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು.
ಅಂತಿಮವಾಗಿ ಮಧ್ಯರಾತ್ರಿ 12.12ರ ಸುಮಾರಿಗೆ ಕನ್ನರ್ಪಾಡಿಯ ಶ್ರೀ ಜಯದುರ್ಗಾಪರಮೇಶ್ವರಿ ದೇವಳದ ಕಣ್ವ ಪುಷ್ಕರಿಣಿಯಲ್ಲಿ ಧೂಮ್ರವರ್ಣ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.
.jpg)
.jpg)
.jpg)